ತಬ್ಲೀಘಿ ಜಮಾಅತ್: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪದಿಂದ 11 ಭಾರತೀಯರು,7 ಇಂಡೋನೇಷ್ಯನ್ನರ ಖುಲಾಸೆ
ಲಕ್ನೋ,ಫೆ.19: ಕಳೆದ ವರ್ಷದ ಮಾರ್ಚ್‌ನಲ್ಲಿ ಸರಕಾರವು ಹೊರಡಿಸಿದ್ದ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದಿಲ್ಲಿಯಲ್ಲಿ ಮೂರು ದಿನಗಳ ತಬ್ಲೀಘಿ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಆರೋಪವನ್ನು ಎದುರಿಸುತ್ತಿದ್ದ 11 ಭಾರತೀಯರು ಮತ್ತು ಏಳು ಇಂಡೋನೇಷ್ಯಾ ಪ್ರಜೆಗಳು ಸೇರಿದಂತೆ 18 ಜನರನ್ನು ಇಲ್ಲಿಯ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಆರೋಪಿಗಳು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದರು ಎನ್ನುವುದಕ್ಕೆ ದಾಖಲೆ ರೂಪದಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿಗಳ ವಿರುದ್ಧ ಐಪಿಸಿ,ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಗಳಡಿ ವಿವಿಧ ಆರೋಪಗಳನ್ನು ಹೊರಿಸಲಾಗಿತ್ತು.
ತನ್ನ ಕಕ್ಷಿದಾರರು ಕೊರೋನವೈರಸ್‌ನ್ನು ಹರಡುವ ಉದ್ದೇಶವನ್ನು ಹೊಂದಿದ್ದರು ಎನ್ನುವುದನ್ನು ತೋರಿಸುವ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ವಾದಿಸಿದ ಆರೋಪಿಗಳ ಪರ ವಕೀಲ ಝಿಯಾ ಜಿಲಾನಿ ಅವರು,ತನ್ನ ಕಕ್ಷಿದಾರರು ಉದ್ದಕ್ಕೂ ಸ್ಥಳೀಯ ಅಧಿಕಾರಿಗಳು ಹೊರಡಿಸಿದ್ದ ನಿರ್ದೇಶಗಳನ್ನು ಪಾಲಿಸಿದ್ದರು ಎಂದು ತಿಳಿಸಿದರು.
ವೃತ್ತಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ ಪ್ರಕಟಗೊಳ್ಳುವ ಯಾವುದೇ ಸುದ್ದಿಯನ್ನು ಸರಕಾರಿ ಅಧಿಕಾರಿಗಳ ಆದೇಶದ ಪ್ರಕಟಣೆಯೆಂದು ಪರಿಗಣಿಸುವಂತಿಲ್ಲ ಎಂದು ಚೀಫ್ ಜ್ಯುಡಿಷಿಯಲ್ ಮ್ಯಾಜಸ್ಟ್ರೇಟ್ ಸುಶೀಲ ಕುಮಾರ ಹೇಳಿದರು. ಮಾಧ್ಯಮಗಳ ವರದಿಗಳನ್ನು ಆಧರಿಸಿ ಕೇಸ್ ಡೈರಿಯು,ಆರೋಪಿಗಳು ಕೋವಿಡ್-19 ಪರೀಕ್ಷೆಗೊಳಗಾಗಿರಲಿಲ್ಲ ಎಂದೂ ಆರೋಪಿಸಿತ್ತು.
ಧಾರ್ಮಿಕ ಭಾಷಣಗಳಂತಹ ಚಟುವಟಿಕೆಗಳಿಲ್ಲದಿದ್ದರೆ ಧಾರ್ಮಿಕ ಸ್ಥಳಗಳಿಗೆ ಭೇಟಿಗೆ ನಿರ್ಬಂಧವಿರಲಿಲ್ಲ ಎಂದು ಹೇಳಿದ ನ್ಯಾಯಾಲಯವು,ಜಮಾಅತ್‌ನ ಇಂಡೋನೇಷ್ಯಾ ಸದಸ್ಯರು ಯಾವುದೇ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಬಗ್ಗೆ,ಧಾರ್ಮಿಕ ಭಾಷಣಗಳನ್ನು ಮಾಡಿದ್ದ ಬಗ್ಗೆ ಕೇಸ್ ಡೈರಿಯಲ್ಲಿ ಉಲ್ಲೇಖಿಸಿಲ್ಲ ಎಂದು ಬೆಟ್ಟು ಮಾಡಿ ಅವರ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಿತು.
ವೀಸಾ ನಿಯಮಗಳಿಗೆ ಸಂಬಂಧಿಸಿದ ವಿದೇಶಿಯರ ಕಾಯ್ದೆಯ ಕಲಂ 14(ಬಿ) ಉಲ್ಲಂಘನೆ ಆರೋಪವನ್ನೂ ನ್ಯಾಯಾಲಯವು ತಳ್ಳಿಹಾಕಿತು. ಜಾಮೀನು ಪಡೆದ ಸಂದರ್ಭದಲ್ಲಿ ಭಾರತೀಯರು ಸಲ್ಲಿಸಿದ್ದ ಎಲ್ಲ ವೈಯಕ್ತಿಕ ಬಾಂಡ್‌ಗಳನ್ನೂ ನ್ಯಾಯಾಲಯವು ಬಿಡುಗಡೆಗೊಳಿಸಿತು.
ದೇಶಾದ್ಯಂತ ಲಾಕ್‌ಡೌನ್‌ನ ಆರಂಭದ ವಾರಗಳಲ್ಲಿ ತಬ್ಲೀಘಿ ಜಮಾಅತ್ ಸಮಾವೇಶವು ಸಾವಿರಾರು ಜನರಿಗೆ ಕೊರೋನವೈರಸ್ ಸೋಂಕು ಹರಡಲು ಕಾರಣವಾಗಿತ್ತು ಎಂದು ದೂರಲಾಗಿತ್ತು. ಸಮಾವೇಶದಿಂದಾಗಿ ಮುಸ್ಲಿಮರ ವಿರುದ್ಧ ಅಪವಾದಗಳು ಮರುಕಳಿಸಿದ್ದವು. ಜನರು ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿದ್ದಲ್ಲದೆ,ಅವರ ವಿರುದ್ಧ ದ್ವೇಷ ಭಾಷಣಗಳೂ ಭುಗಿಲೆದ್ದಿದ್ದವು.
ಡಿಸೆಂಬರ್‌ನಲ್ಲಿ ದಿಲ್ಲಿಯ ನ್ಯಾಯಾಲಯವೊಂದು ಸಮಾವೇಶದಲ್ಲಿ ಭಾಗವಹಿಸಿದ್ದ 36 ವಿದೇಶಿಯರನ್ನು ಖುಲಾಸೆಗೊಳಿಸಿತ್ತು. ಆಗಸ್ಟ್‌ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯವೂ 35 ಅರ್ಜಿದಾರರ ವಿರುದ್ಧದ ಮೂರು ಎಫ್‌ಐಆರ್‌ಗಳನ್ನು ರದ್ದುಗೊಳಿಸಿತ್ತು. ಈ ಪೈಕಿ 29 ಜನರು ವಿದೇಶ ಪ್ರಜೆಗಳಾಗಿದ್ದು,ತಬ್ಲೀಘಿ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿದ್ದರು.