ಬ್ಯಾಂಕ್ ಲಾಕರ್ ನೂತನ ನಿಯಮ ರೂಪಿಸಲು ಆರ್‌ಬಿಐಗೆ ಸೂಚಿಸಿದ ಸುಪ್ರೀಂ

Update: 2021-02-19 17:51 GMT

ಹೊಸದಿಲ್ಲಿ, ಫೆ.19: ದೇಶದಾದ್ಯಂತದ ಬ್ಯಾಂಕ್‌ಗಳು ಪಾಲಿಸಬೇಕಾದ ನೂತನ ಬ್ಯಾಂಕ್ ಲಾಕರ್ ನಿರ್ವಹಣಾ ನಿಯಮವನ್ನು ರಿಸರ್ವ್ ಬ್ಯಾಂಕ್(ಆರ್‌ಬಿಐ) ಆರು ತಿಂಗಳೊಳಗೆ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ. ಲಾಕರ್‌ನಲ್ಲಿ ಗ್ರಾಹಕರು ಏನು ಇರಿಸಿದ್ದಾರೆ ಎಂದು ತಿಳಿದುಕೊಂಡಿರದ ಕಾರಣ, ಲಾಕರ್‌ಗಳ ಭದ್ರತೆಯಲ್ಲಿ ವಿಫಲವಾದರೆ ಅದು ತಮ್ಮ ಹೊಣೆಯಾಗದು ಎಂದು ಬ್ಯಾಂಕ್‌ಗಳು ತಪ್ಪು ತಿಳುವಳಿಕೆ ಹೊಂದಿದೆ.

ಬ್ಯಾಂಕ್‌ಗಳು ಸಾರ್ವಜನಿಕರ(ಗ್ರಾಹಕರ) ಆಸ್ತಿಗಳ ಅಭಿರಕ್ಷಕರಾದ್ದರಿಂದ(ಪಾಲಕರು), ಲಾಕರ್‌ಗಳಲ್ಲಿ ಏನಿದೆ ಎಂಬುದು ತಮಗೆ ತಿಳಿದಿಲ್ಲ ಎಂದು ಪ್ರತಿಪಾದಿಸುವ ಮೂಲಕ ಗ್ರಾಹಕರನ್ನು ಆತಂಕಕ್ಕೆ ಒಳಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ ಈಗಿರುವ ಲಾಕರ್ ನಿರ್ವಹಣಾ ನಿಯಮ ಅಸಮರ್ಪಕ ಮತ್ತು ಗೊಂದಲ ಮೂಡಿಸುವಂತಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ತಾನು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲಾಕರ್ ಹೊಂದಿದ್ದು ಸಾಲದ ಕಂತು ಪಾವತಿಗೆ ಬಾಕಿಯಿದೆ ಎಂದು ಹೇಳಿ ಅಧಿಕಾರಿಗಳು ತನ್ನ ಲಾಕರ್ ಅನ್ನು ಒಡೆದು ತೆರೆದಿದ್ದಾರೆ. ಬಳಿಕ ಲಾಕರ್‌ನಲ್ಲಿದ್ದ ಒಡವೆಗಳನ್ನು ಬ್ಯಾಂಕ್‌ನವರು ವಾಪಾಸು ನೀಡಿದಾಗ, ಕೇವಲ 2 ಆಭರಣ ಮಾತ್ರವಿತ್ತು. ಉಳಿದ 5 ಆಭರಣ ನಾಪತ್ತೆಯಾಗಿತ್ತು ಎಂದು ಬ್ಯಾಂಕ್ ಗ್ರಾಹಕ ಅಮಿತಾಭ್ ದಾಸ್‌ಗುಪ್ತ ಎಂಬವರು ದೂರು ನೀಡಿದ್ದು ಜಿಲ್ಲಾ ಬಳಕೆದಾರರ ವೇದಿಕೆ ದಾಸ್‌ಗುಪ್ತಗೆ 3 ಲಕ್ಷ ರೂ. ಪರಿಹಾರ ಒದಗಿಸುವಂತೆ ಸೂಚಿಸಿತ್ತು. ಇದರ ವಿರುದ್ಧ ಬ್ಯಾಂಕ್‌ನವರು ರಾಜ್ಯ ಗ್ರಾಹಕ ವೇದಿಕೆಗೆ ದೂರು ನೀಡಿದಾಗ ಪರಿಹಾರ ಮೊತ್ತವನ್ನು 30,000 ರೂ.ಗೆ ಇಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ದಾಸ್‌ಗುಪ್ತ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್‌ನವರು ಗ್ರಾಹಕರ ವಿರುದ್ಧ ಏಕಪಕ್ಷೀಯ ನಿಯಮಗಳನ್ನು ವಿಧಿಸುವಂತಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್, ಗ್ರಾಹಕರಿಗೆ ಮಾಹಿತಿ ನೀಡದೆ ಲಾಕರ್ ಒಡೆಯುವಂತಿಲ್ಲ. ಆದ್ದರಿಂದ ಬ್ಯಾಂಕ್‌ನವರು 5 ಲಕ್ಷ ರೂ. ದಂಡ ನೀಡಬೇಕು. ದಂಡದ ಮೊತ್ತವನ್ನು ತಪ್ಪೆಸಗಿದ ಅಧಿಕಾರಿಯಿಂದ ವಸೂಲಿ ಮಾಡಬೇಕು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News