ಕೊರೋನ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಏರಿಕೆ: ಕೋವಿಡ್ ನಿಯಮಗಳನ್ನು ಬಿಗಿಗೊಳಿಸಿದ ಎನ್‌ಎಂಸಿ
ನಾಗಪುರ, ಫೆ. 19: ಹೆಚ್ಚುತ್ತಿರುವ ಕೊರೋನ ಸೋಂಕಿನ ಸಂಖ್ಯೆಯನ್ನು ನಿಯಂತ್ರಿಸಲು ಮುಂಬೈ ಬಳಿಕ ನಾಗಪುರ ಮುನ್ಸಿಪಲ್ ಕಾರ್ಪೊರೇಶನ್ (ಎನ್‌ಎಂಸಿ) ಶುಕ್ರವಾರ ಕೊರೋನ-19 ನಿಯಮಗಳನ್ನು ಬಿಗಿಗೊಳಿಸಿದೆ.
ಇಂದಿನಿಂದ ಹೊಟೇಲ್‌ಗಳಲ್ಲಿ ಶೇಕಡ 50 ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗುವುದು ಅಲ್ಲದೆ, 5ಕ್ಕಿಂತ ಹೆಚ್ಚು ಕೊರೋನ ಪಾಸಿಟಿವ್ ಪ್ರಕರಣಗಳಿರುವ ಕಟ್ಟಡಗಳನ್ನು ಸೀಲ್ ಮಾಡಲಾಗುವುದು. ಹೋಮ್ ಕ್ವಾರಂಟೈನ್‌ನಲ್ಲಿರುವವರಿಗೆ ಕೈಗಳಿಗೆ ಮುದ್ರೆ ಹಾಕಲಾಗುವುದು. ಅಂತ್ಯ ಸಂಸ್ಕಾರದ ಸಂದರ್ಭ 20ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ಎನ್‌ಎಂಸಿಯ ನಿರ್ದೇಶನ ತಿಳಿಸಿದೆ. ನಾಗಪುರದಲ್ಲಿ ಗುರುವಾರ ಕೊರೋನ ಸೋಂಕಿನ 644 ಹೊಸ ಪ್ರಕರಣಗಳು ವರದಿಯಾಗಿವೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 1,41,028ಕ್ಕೆ ಏರಿಕೆಯಾಗಿದೆ. ಗುರುವಾರ 6 ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ. ವಿವಿಧ ಚಿಕಿತ್ಸಾ ಕೇಂದ್ರದಿಂದ 250 ಮಂದಿ ಬಿಡುಗಡೆಯಾಗಿದ್ದಾರೆ. 75 ದಿನಗಳ ಬಳಿಕ ಮಹಾರಾಷ್ಟ್ರದಲ್ಲಿ ಗುರುವಾರ 5,000ಕ್ಕೂ ಅಧಿಕ ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿತ್ತು. ಅಕೋಲಾ ಹಾಗೂ ನಾಗಪುರ ವಿಭಾಗದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 5,427 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 20,81,520ಕ್ಕೆ ಏರಿಕೆಯಾಗಿದೆ. ಒಟ್ಟು 38 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 51,669ಕ್ಕೆ ಏರಿಕೆಯಾಗಿದೆ.