ನನ್ನ ತಾಯಿಯನ್ನು ಗಲ್ಲಿಗೇರಿಸಬೇಡಿ: ರಾಷ್ಟ್ರಪತಿಗೆ ಶಬ್ನಂ ಅಲಿ ಪುತ್ರನ ಮನವಿ
ಲಕ್ನೊ: ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಮಹಿಳಾ ಅಪರಾಧಿಯನ್ನು ಗಲ್ಲಿಗೇರಿಸುವುದಕ್ಕೆ ಉತ್ತರಪ್ರದೇಶದ ಜೈಲು ಸಿದ್ಧತೆ ನಡೆಸಿದೆ. 2008ರಲ್ಲಿ ಮಗು ಸೇರಿದಂತೆ ತನ್ನ ಕುಟುಂಬದ 7 ಸದಸ್ಯರುಗಳನ್ನು ಕೊಂದಿದ್ದಕ್ಕಾಗಿ ಶಬ್ನಮ್ ಅಲಿಗೆ ಮರಣದಂಡನೆ ವಿಧಿಸಲಾಗಿದೆ.
ಇದೀಗ ಶಬ್ನಮ್ ಅಲಿಯ 12 ವರ್ಷದ ಮಗ ಮುಹಮ್ಮದ್ ತಾಜ್ ತನ್ನ ತಾಯಿಗೆ ನೀಡಿರುವ ಮರಣದಂಡನೆಯನ್ನು ರದ್ದುಪಡಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿದ್ದಾನೆ.
“ರಾಷ್ಟ್ರಪತಿ ಅಂಕಲ್ ಜೀ, ದಯವಿಟ್ಟು ನನ್ನ ತಾಯಿ ಶಬ್ನಮ್ ಅವರನ್ನು ಕ್ಷಮಿಸಿ’’ಎಂದು ಬರೆದಿದ್ದ ಸ್ಲೇಟನ್ನು ಬಾಲಕ ಪ್ರದರ್ಶಿಸಿದ್ದಾನೆ.
“ನಾನು ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ರಾಷ್ಟಪತಿ ಅಂಕಲ್ ಬಳಿ ನನ್ನ ಒಂದೇ ಒಂದು ಬೇಡಿಕೆ ಇದೆ. ನನ್ನ ತಾಯಿಯನ್ನು ಗಲ್ಲಿಗೇರಿಸಲು ಅವರು ಬಿಡಬಾರದು’’ಎಂದು ಗುರುವಾರ ಸುದ್ದಿಗಾರರಿಗೆ ತಾಜ್ ತಿಳಿಸಿದರು.
ತಾಯಿಯನ್ನು ಕ್ಷಮಿಸುವುದು ರಾಷ್ಟ್ರಪತಿಗೆ ಬಿಟ್ಟ ವಿಚಾರ. ಆದರೆ ನನಗೆ ನಂಬಿಕೆ ಇದೆ ಎಂದು ಬಾಲಕ ಹೇಳಿದ್ದಾನೆ.
ತಾಜ್ ಸದ್ಯ ತನ್ನ ಸಾಕು ತಂದೆ ಉಸ್ಮಾನ್ ಸೈಫಿ ಎಂಬ ಪತ್ರಕರ್ತನೊಂದಿಗೆ ವಾಸಿಸುತ್ತಿದ್ದಾನೆ. ಶಬ್ನಮ್ ಪ್ರಕರಣದ ಕುರಿತು ಬರೆದಿದ್ದ ಸೈಫಿ ಆಗಾಗ ಆಕೆ ಇರುವ ಜೈಲಿಗೆ ಹೋಗುತ್ತಿದ್ದಾರೆ.
"ನಾನು ಜೈಲಿಗೆ ಹೋದಾಗಲೆಲ್ಲಾ ತಾಯಿ ನನ್ನ ಅಪ್ಪಿಕೊಳ್ಳುತ್ತಾಳೆ. ಏನು ಮಾಡುತ್ತಿದ್ದೀಯಾ? ನಿನ್ನ ಶಾಲೆ ಯಾವಾಗ ಆರಂಭವಾಗುತ್ತದೆ? ನಿಮ್ಮ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ನಿನ್ನ ತಂದೆ(ಸೈಫಿ) ಹಾಗೂ ತಾಯಿಗೆ ತೊಂದರೆ ನೀಡುತ್ತಿಲ್ಲವಲ್ಲಾ? ಎಂದು ಪ್ರಶ್ನಿಸುತ್ತಾರೆ'' ಎಂದು ಬಾಲಕ ಹೇಳಿದ್ದಾನೆ.
"ನಾವು ಬಾಲಕನಿಗೆ ಉತ್ತಮ ಶಿಕ್ಷಣ ನೀಡಲು, ಅವನನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ. ಅವನ ತಾಯಿಯು ಯಾವ ಅಪರಾಧಕ್ಕೆ ಶಿಕ್ಷೆಗೊಳಗಾಗಿದ್ದರೂ ಮಗು ಅಪರಾಧಿಯಲ್ಲ'' ಎಂದು ಉಸ್ಮಾನ್ ಸೈಫಿ ಹೇಳಿದ್ದಾರೆ.