ಮರ್ಕಂಜದಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

Update: 2021-02-20 12:53 GMT

ಸುಳ್ಯ: ಸಮಸ್ಯೆಗಳನ್ನು ಪರಿಹರಿಸಿ ಗ್ರಾಮೀಣ ಭಾಗದ ಜನರ ಜೀವನ ಸುಧಾರಣೆ ಮಾಡುವ ಉದ್ದೇಶದಿಂದ  ಗ್ರಾಮ ವಾಸ್ತವ್ಯ ನಡೆಸಲು ಅಧಿಕಾರಿಗಳಿಗೆ ಸರಕಾರ ಸೂಚಿಸಿದೆ. ಅಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಅಧಿಕಾರಿಗಳು ಮತ್ತು ಜನರ ಮಧ್ಯೆ ವಿಶ್ವಾಸ ವೃದ್ಧಿಸಲು ಸಾಧ್ಯ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. 

ಸುಳ್ಯ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಅನಿತಾ ಲಕ್ಷ್ಮಿ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಮಕರ್ಂಜ ಗ್ರಾಮದ ತೇರ್ಥಮಜಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಜನರು ತಮ್ಮ ಇಲಾಖಾ ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಿಗೆ ಅಲೆದಾಡಬೇಕಾಗಿತ್ತು. ಇದೀಗ  ಅಧಿಕಾರಿಗಳೇ ಜನರ ಬಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಮಹತ್ವದ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ ಬಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಮಕರ್ಂಜ ಗ್ರಾ.ಪಂ. ಉಪಾಧ್ಯಕ್ಷ ಗೋವಿಂದ ಹಾಗು ಗ್ರಾ.ಪಂ.ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಅನಿತಾ ಲಕ್ಷ್ಮೀ ಎಸ್. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News