ಶಿಶಿಲ, ಸೀತಾನದಿ ಸೇರಿ ಇನ್ನೂ 15 ಮತ್ಸಧಾಮಕ್ಕೆ ಶಿಫಾರಸ್ಸು

Update: 2021-02-20 13:08 GMT

ಉಡುಪಿ, ಫೆ.20: ರಾಜ್ಯದ ವಿವಿಧ ನದಿಗಳಲ್ಲಿರುವ ಅಪರೂಪದ ಮೀನಿನ ತಳಿಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದಲ್ಲಿ ಇನ್ನೂ 15 ಮತ್ಸಧಾಮಗಳನ್ನು ಘೋಷಿಸುವಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿ, ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡ ಜಲಸಾರಿಗೆ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ರಾಜ್ಯದಲ್ಲಿ ಈಗಾಗಲೇ 11 ಮತ್ಸಧಾಮಗಳಿದ್ದು, ಇವುಗಳಿಗೆ ಪೂರಕವಾಗಿ ಇನ್ನೂ 15 ವಿಶೇಷ ಮೀನುಗಳ ಆಶ್ರಯತಾಣಗಳನ್ನು 'ಕರ್ನಾಟಕ ಒಳನಾಡು ಮೀನುಗಾರಿಕೆ ಕಾಯ್ದೆ' ಅನ್ವಯ ಮತ್ಸಧಾಮಗಳೆಂದು ಘೋಷಿಸಲು ಮನವಿ ಮಾಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ಇವುಗಳಲ್ಲಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸೀತಾನದಿಯಲ್ಲಿರುವ ಸೀತಾನದಿ ಪ್ರದೇಶ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕುಮಾರಧಾರ ನದಿ, ಕಲ್ಮಾರುವಿನ ಫಾಲ್ಗುಣಿ ನದಿ, ಸುಳ್ಯ ತಾಲೂಕಿನ ಮರಕತಾದ ಯೆನೆಕಲ್ ನದಿ, ಪುತ್ತೂರು ತಾಲೂಕು ನಾಕೂರ್‌ಗಯದ ನೇತ್ರಾವತಿ ನದಿ, ಸುಳ್ಯದ ನಿಸರ್ಗಧಾಮದ ಕಲ್ಲಾಜೆ ನದಿ, ನಲ್ಕೂರಿನ ಕುಮಾರಧಾನ ನದಿ, ಉಪ್ಪುಕುಳದ ಕಲ್ಲಾಜೆ ನದಿ, ಕಡಬ ಅಡ್ಡಹೊಳೆಯ ಕುಮಾರಧಾರ ನದಿಯೂ ಸೇರಿವೆ.

ಉಳಿದಂತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನತಿಟ್ಟು ಮತ್ತು ಮುತ್ತತ್ತಿಯ ಕಾವೇರಿ ನದಿ, ಕೊಡಗು ಜಿಲ್ಲೆ ಸೋಮವಾರಪೇಟೆ ಕುಶಾಲನಗರದಲ್ಲಿ ಕಾವೇರಿ ನದಿ, ಕಲಬುರಗಿ ಜಿಲ್ಲೆಯ ಭಗವತಿ ಛಾಯಾಕೊಳ್ಳದ ಕೃಷ್ಣ ನದಿ, ಉ.ಕ.ಜಿಲ್ಲೆ ಅಂಕೋಲದ ಗಂಗಾವಳಿ ನದಿ, ಕೊಡಗು ಜಿಲ್ಲೆ ಮಡಿಕೇರಿಯ ಕಾವೇರಿ ನದಿಯೂ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News