ದಿಲ್ಲಿ ಗಲಭೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

Update: 2021-02-21 17:49 GMT

ಹೊಸದಿಲ್ಲಿ, ಫೆ. 21: ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದ ಮೂವರು ಕೊಲೆ ಆರೋಪಿಗಳಿಗೆ ಎನ್‌ಡಿಟಿವಿಯ ವೀಡಿಯೊದ ಆಧಾರದಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಎನ್‌ಡಿಟಿವಿಯ ರವೀಶ್ ಕುಮಾರ್ ಅವರ ಪ್ರೈಮ್ ಟೈಮ್’ ಕಾರ್ಯಕ್ರಮದಲ್ಲಿ ಈ ವೀಡಿಯೊವನ್ನು ಪ್ರದರ್ಶಿಸಲಾಗಿತ್ತು. ಪ್ರಾಸಿಕ್ಯೂಷನ್‌ಗೆ ಮುಖ್ಯ ಸಾಕ್ಷಿಯಾಗಿ ಬಳಸಿರುವ ಈ ವೀಡಿಯೊದಲ್ಲಿ ಯಾವುದೇ ಆರೋಪಿಗಳು ಕಾಣಿಸಿಕೊಂಡಿಲ್ಲ ಎಂದು ಪ್ರತಿವಾದಿ ವಕೀಲರು ನ್ಯಾಯಾಲಯದ ಗಮನ ಸೆಳೆದರು.

2020 ಫೆಬ್ರವರಿಯಲ್ಲಿ ದಿಲ್ಲಿ ಗಲಭೆ ಸಂದರ್ಭ ಶಾಹಿದ್ ಎಂಬವರನ್ನು ಹತ್ಯೆಗೈದ ಆರೋಪಿಗಳಾದ ಈ ಮೂವರ ವಿರುದ್ಧ ನೇರವಾದ ಅಥವಾ ಸಾಂದರ್ಭಿಕ ಅಥವಾ ವಿಧಿವಿಜ್ಞಾನದ ಪರೀಕ್ಷೆಯ ಪುರಾವೆಗಳಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿ ಆರೋಪಿಗಳಾದ ಜುನೈದ್, ಚಾಂದ್ ಮುಹಮ್ಮದ್ ಹಾಗೂ ಇರ್ಷಾದ್‌ಗೆ 2020 ಎಪ್ರಿಲ್‌ನಿಂದ 10 ತಿಂಗಳ ಕಾಲ ಕಸ್ಟಡಿ ವಿಧಿಸಲಾಗಿತ್ತು.

ದಿಲ್ಲಿಯ ಕಟ್ಟಡವೊಂದರಲ್ಲಿ ನಿಂತು ಹಿಂದೂ ಗುಂಪು ಗುಂಡು ಹಾರಿಸುವ ಹಾಗೂ ಕಲ್ಲು ಎಸೆಯುವ ಮೂಲಕ ದಾಳಿ ನಡೆಸುವ ಸಂದರ್ಭ ಆರೋಪಿಗಳು ಈಶಾನ್ಯ ದಿಲ್ಲಿಯ ಚಾಂದ್‌ಬಾಗ್ ಪ್ರದೇಶದಲ್ಲಿರುವ ಸಪ್ತರ್ಷಿ ಕಟ್ಟಡದ ಛಾವಣಿ ಮೇಲೆ ನಿಂತಿದ್ದ ಮುಸ್ಲಿಂ ಗುಂಪಿನ ಜೊತೆ ಇದ್ದರು. ಗುಂಡಿನ ದಾಳಿಯಿಂದ ಸಪ್ತರ್ಷಿ ಕಟ್ಟಡದ ಛಾವಣಿಯಲ್ಲಿದ್ದ ಶಾಹಿದ್ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದರು. ಎನ್‌ಡಿಟಿವಿಯ ವರದಿಯಲ್ಲಿ ಪ್ರದರ್ಶಿಸಲಾದ ವೀಡಿಯೊದಲ್ಲಿ ಸಪ್ತರ್ಷಿ ಕಟ್ಟಡದ ಎದುರಿರುವ ಮೋಹನ್ ನರ್ಸಿಂಗ್ ಹೋಮ್ ಕಟ್ಟಡದ ಛಾವಣಿಯಿಂದ ಗುಂಡು ಹಾರಿಸಿರುವ ದೃಶ್ಯ ಸೆರೆಯಾಗಿದೆ. ಪೊಲೀಸರು ತನಿಖೆಯಲ್ಲಿ ಕೇವಲ ಒಂದು ಭಾಗದಲ್ಲಿದ್ದ ಕಟ್ಟಡದ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿದ್ದಾರೆ. ಮೋಹನ್ ನರ್ಸಿಂಗ್ ಹೋಮ್ ಕಟ್ಟಡವನ್ನು ನಿರ್ಲಕ್ಷಿಸಿದ್ದಾರೆ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

 “ದೂರುದಾರರ ಪರ ವಕೀಲರು ಸಲ್ಲಿಸಿದ ವೀಡಿಯೊದಲ್ಲಿ 10 ನಿಮಿಷಗಳ ಬಳಿಕ ರವೀಶ್ ಕುಮಾರ್ ಅವರ ಎನ್‌ಡಿಟಿವಿ ಪ್ರೈಮ್ ಟೈಮ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ, ಮೋಹನ್ ನರ್ಸಿಂಗ್ ಹೋಮ್ ಆಸ್ಪತ್ರೆಯಿಂದ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದಾನೆ ಹಾಗೂ ಆತ ಹೆಲ್ಮೆಟ್ ಧರಿಸಿದ್ದಾನೆ. ಇಲ್ಲಿ ಇನ್ನೋರ್ವ ವ್ಯಕ್ತಿ ತನ್ನ ಆಯುಧಕ್ಕೆ ಕರವಸ್ತ್ರ ಮುಚ್ಚಿದ್ದಾನೆ ಎಂದು ಹೇಳಿದ್ದಾಳೆ. ಆನಂತರ ಆ ದೃಶ್ಯ ಪ್ರಸಾರವಾಗಿದೆ’’ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News