ಭಾರತದ ಇಬ್ಬರು ಬಾಕ್ಸರ್‌ಗಳಿಗೆ ಚಿನ್ನ

Update: 2021-02-22 05:04 GMT

 ಬುಡ್ವಾ,: ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30ನೇ ಆಡ್ರಿಯಾಟಿಕ್ ಪರ್ಲ್ ಟೂರ್ನ ಮೆಂಟ್‌ನಲ್ಲಿ ಭಾರತದ ಯುವ ಬಾಕ್ಸರ್‌ಗಳಾದ ವಿಂಕಾ (60 ಕೆ.ಜಿ.) ಮತ್ತು ಟಿ. ಸನಾಮಾಚಾ ಚಾನು (75 ಕೆ.ಜಿ.) ಚಿನ್ನದ ಪದಕ ಗೆದ್ದಿದ್ದಾರೆ.

 ಎರಡು ಚಿನ್ನದ ಪದಕಗಳ ಹೊರತಾಗಿಯೂ ಸ್ಪರ್ಧೆಯ ಅಂತಿಮ ದಿನದಂದು ಭಾರತದ ಬಾಕ್ಸರ್‌ಗಳು ಎರಡು ಬೆಳ್ಳಿ ಮತ್ತು ಮೂರು ಕಂಚುಗಳನ್ನು ಬಾಚಿಕೊಂಡರು.

ಇದಕ್ಕೂ ಮುನ್ನ ಪಂದ್ಯಾವಳಿ ಯಲ್ಲಿ ಅಲ್ಫಿಯಾ ಪಠಾಣ್(+ 81 ಕೆ.ಜಿ.) ದೇಶದ ಪರ ಮೊದಲ ಚಿನ್ನ ಜಯಿಸಿದ್ದರು.

 ಫೈನಲ್‌ನಲ್ಲಿ ರೋಹ್ಟಕ್‌ನ ವಿಂಕಾ ತನ್ನ ಎದುರಾಳಿ ಮೊಲ್ಡೊವಾ ಕ್ರಿಸ್ಟಿನಾ ಕ್ರಿಪ್ಪರ್‌ರನ್ನು 5-0 ಅಂತರದಿಂದ ಮಣಿಸಿದರು. 75 ಕೆ.ಜಿ. ವಿಭಾಗದಲ್ಲಿ ಮಣಿಪುರಿ ಹುಡುಗಿ ಸನಾಮಾಚಾ ಅವರು 5-0 ಅಂತರದಿಂದ ರಾಜ್ ಸಾಹಿಬಾ ಅವರನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಟ್ಟರು.

 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಗೀತಿಕಾ ಅವರು ಉಜ್ಬೇಕಿಸ್ತಾನ್‌ನ ಫರ್ಜೋನಾ ಫೊಜಿಲೋವಾ ವಿರುದ್ಧ 1-4 ಅಂತರದಲ್ಲಿ ಸೋತು ಬೆಳ್ಳಿ ಪಡೆದರು.

 ಮಹಿಳೆಯರ 57 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಪ್ರೀತಿ 1-4ರಿಂದ ಮಾಂಟೆನೆಗ್ರೊದ ಬೊಜಾನಾ ಗೊಜ್ಕೊವಿಕ್ ಎದುರು ಸೋತು ಕಂಚು ಪಡೆದರು. ಇದೇ ವೇಳೆ ಪ್ರಿಯಾಂಶು ದಬಾಸ್ (49ಕೆ.ಜಿ.) ಮತ್ತು ಜುಗ್ನೂ ಪುರುಷರ ತಂಡಕ್ಕೆ ಕಂಚು ತಂದುಕೊಟ್ಟರು. ಇಬ್ಬರೂ ತಮ್ಮ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಪ್ರಿಯಾಂಶು ಉಜ್ಬೇಕಿಸ್ತಾನ್‌ನ ಇಶ್ಜೊನೊವ್ ಇಬ್ರೊಖಿಮ್ ವಿರುದ್ಧ 2-3 ಅಂತರದಲ್ಲಿ ಸೋಲು ಕಂಡರೆ, ಜುಗ್ನೂ +91 ಕೆ.ಜಿ. ವಿಭಾಗದಲ್ಲಿ ಉಕ್ರೇನ್‌ನ ವಾಸಿಲ್ ಟಕಾಚುಕ್‌ಗೆ 0-5 ಅಂತರದಲ್ಲಿ ಶರಣಾದರು.

64 ಕೆ.ಜಿ. ಮಹಿಳೆಯರ ಕೊನೆಯ ನಾಲ್ಕು ಸ್ಪರ್ಧೆಗಳಲ್ಲಿ ಲಕ್ಕಿ ರಾಣಾ ಉಜ್ಬೇಕಿಸ್ತಾನ್‌ನ ಗುಲ್ಶೋಡಾ ಇಸ್ತಮೋವಾ ವಿರುದ್ಧ 3-0 ಅಂತರದಲ್ಲಿಜಯ ಸಾಧಿಸಿದರು. ಫೈನಲ್‌ನಲ್ಲಿ ಲಕ್ಕಿ ರಾಣಾ ಅವರು ಫಿನ್‌ಲ್ಯಾಂಡ್‌ನ ಲಿಯಾ ಪುಕ್ಕಿಲಾ ಅವರನ್ನು ಎದುರಿಸಲಿದ್ದಾರೆ.

 ಲಕ್ಕಿ ಅವರಲ್ಲದೆ ಭಾರತದ ಇಬ್ಬರು ಮಹಿಳಾ ಬಾಕ್ಸರ್‌ಗಳು ಅಂತಿಮ ದಿನ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ, ಬಾಬಿರೋಜಿಸಾನಾ ಚಾನು (51 ಕೆ.ಜಿ.) ಮತ್ತು ಅರುಂಧತಿ ಚೌಧರಿ(69 ಕೆ.ಜಿ.) ಚಿನ್ನದ ಪದಕಕ್ಕಾಗಿ ಬೇಟೆ ನಡೆಸಲಿದ್ದಾರೆ. ಚಾನು ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಲಿದ್ದರೆ, ಅರುಂಧತಿ ಉಕ್ರೇನ್‌ನ ಮರಿಯಾನಾ ಸ್ಟೊಯಿಕೊ ವಿರುದ್ಧ ಹೋರಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News