ವಿಜಯ್ ಹಝಾರೆ ಟ್ರೋಫಿ: ಪೃಥ್ವಿ ಶಾ ಶತಕ; ಮುಂಬೈಗೆ ಜಯ

Update: 2021-02-22 11:07 GMT

ಜೈಪುರ: ಪೃಥ್ವಿ ಶಾ ಅಜೇಯ ಶತಕ(105) ನೆರವಿನಲ್ಲಿ ದಿಲ್ಲಿ ವಿರುದ್ಧ ಮುಂಬೈ ತಂಡ ಇಲ್ಲಿ ನಡೆದ ವಿಜಯ ಹಝಾರೆ ಟ್ರೋಫಿ ಡಿ’ ಗುಂಪಿನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಗಳಿಸಿದೆ.

ಗೆಲುವಿಗೆ 212 ರನ್‌ಗಳ ಸವಾಲನ್ನು ಪಡೆದ ಮುಂಬೈ ತಂಡ ಪ್ರಥ್ವಿ ಶಾ ಶತಕ ಮತ್ತು ಸೂರ್ಯಕುಮಾರ್ ಯಾದವ್ ಅಧರ್ಶತಕ(50) ನೆರವಿನಲ್ಲಿ 36.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿ ಗೆಲುವಿನ ದಡ ಸೇರಿತು.

ಪ್ರಥ್ವಿ ಶಾ 89 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 105 ರನ್ ಗಳಿಸಿದರು. ನಿನ್ನೆಯಷ್ಟೇ ಭಾರತದ ಟ್ವೆಂಟಿ-20 ತಂಡಕ್ಕೆ ಆಯ್ಕೆಯಾಗಿದ್ದ ಸೂರ್ಯಕುಮಾರ್ ಯಾದವ್ ಅರ್ಧಶತಕದ ಮೂಲಕ ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ದಿಲ್ಲಿ ತಂಡ 18.5 ಓವರ್‌ಗಳಲ್ಲಿ 32ಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡರೂ ಹಿಮ್ಮತ್ ಸಿಂಗ್ ಮತ್ತು ಶಿವಾನಿಕ್ ವಶಿಷ್ಟ ಅವರು 7ನೇ ವಿಕೆಟ್‌ಗೆ ದಾಖಲಿಸಿದ 122 ರನ್‌ಗಳ ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 211 ರನ್ ಗಳಿಸಿತ್ತು.

ಹಿಮ್ಮತ್ ಸಿಂಗ್ ಔಟಾಗದೆ 106 ರನ್(145ಎ, 6ಬೌ,2ಸಿ) ಮತ್ತು ಶಿವಾನಿಕ್ 55 ರನ್ (70ಎ, 6ಬೌ) ಗಳಿಸಿದರು. ನಾಯಕ ಪ್ರದೀಪ್ ಸಾಂಗ್ವಾನ್(28 ) ಮತ್ತು ಹಿಮ್ಮತ್ ಸಿಂಗ್ 8ನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 211ಕ್ಕೆ ಏರಿಸಿದರು. ತಂಡದ ಸಹ ಆಟಗಾರರು ವಿಫಲರಾದರು. ಮುಂಬೈ ತಂಡದ ಉತ್ತಮ ಫೀಲ್ಡಿಂಗ್‌ನಿಂದಾಗಿ ಇನಿಂಗ್ಸ್ ಆರಂಭಿಸಿದ ಅನುಜ್ ರಾವತ್(0) ಮತ್ತು ಶಿಖರ್ ಧವನ್(0) ಖಾತೆ ತೆರೆಯದೆನಿರ್ಗಮಿಸಿದ್ದರು. ಬಳಿಕ ಧವಳ್ ಕುಲಕರ್ಣಿ (35ಕ್ಕೆ 3) ಮತ್ತು ಶಮ್ಸ್ ಮುಲಾನಿ(33ಕ್ಕೆ 2) ದಾಳಿಗೆ ಸಿಲುಕಿ ದಿಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಮೂವರು ಆಟಗಾರರು ಸೊನ್ನೆ ಸುತ್ತಿದರು. ನಿತೀಶ್ ರಾಣಾ (2), ಕೆ.ಶರ್ಮಾ(5), ಲಲಿತ್ ಯಾದವ್(5) ವಿಫಲರಾದರು. ಬಳಿಕ ಹಿಮ್ಮತ್ ಸಿಂಗ್ ಮತ್ತು ಶಿವಾನಿಕ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು.

► ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸೌರಾಷ್ಟ್ರಕ್ಕೆ 3 ವಿಕೆಟ್‌ಗಳ ಜಯ

► ಸರ್ವಿಸಸ್ ವಿರುದ್ಧ ಬೆಂಗಾಲ್‌ಗೆ 70 ರನ್‌ಗಳ ಗೆಲುವು

► ಹರಿಯಾಣ ವಿರುದ್ಧ ಚಂಡಿಗಡಕ್ಕೆ 3 ವಿಕೆಟ್‌ಗಳ ಜಯ

► ಮಣಿಪುರ ವಿರುದ್ಧ ಅಸ್ಸಾಂಗೆ 10 ವಿಕೆಟ್‌ಗಳ ಜಯ.

► ಅರುಣಾಚಲಪ್ರದೇಶ-ಮಿರೊರಾಂ ಪಂದ್ಯ ಮಳೆಯಿಂದಾಗಿ ರದ್ದು

► ಸಿಕ್ಕಿಂ ವಿರುದ್ಧ ನಾಗಲ್ಯಾಂಡ್‌ಗೆ 98 ರನ್‌ಗಳ ಜಯ.

► ಮೇಘಾಲಯ ವಿರುದ್ಧ ಉತ್ತರಾಖಂಡಕ್ಕೆ 6 ವಿಕೆಟ್‌ಗಳ ಜಯ

► ಪುದುಚೇರಿ ವಿರುದ್ಧ ರಾಜಸ್ಥಾನ್ ತಂಡಕ್ಕೆ 6 ವಿಕೆಟ್‌ಗಳ ಜಯ

► ಹಿಮಾಚಲ ಪ್ರದೇಶ ವಿರುದ್ಧ ಮಹಾರಾಷ್ಟ್ರಕ್ಕೆ 59 ರನ್‌ಗಳ ಗೆಲುವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News