ಕೇಂದ್ರ ಪುರಸ್ಕೃತ ವಸತಿ ಯೋಜನೆ: ಮನೆ ವಿತರಣೆಗೆ ತಂಡ ರಚನೆಗೆ ಸಂಸದ ನಳಿನ್ ಸೂಚನೆ

Update: 2021-02-22 12:11 GMT

ಮಂಗಳೂರು, ಫೆ. 22: ಕೇಂದ್ರ ಪುರಸ್ಕೃತ ವಸತಿ ಯೋಜನೆಯಲ್ಲಿ ದ.ಕ ಜಿಲ್ಲೆ ಹಿಂದುಳಿದಿದ್ದು ಮಳೆಗಾಲಕ್ಕೆ ಮೊದಲು ಫಲಾನುಭವಿಗಳಿಗೆ ಮನೆ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಬೇಕು, ಅದಕ್ಕೆ ಪೂರಕವಾಗಿ 10 ದಿನದೊಳಗೆ ತಂಡವೊಂದನ್ನು ರಚಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ದ.ಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಿಯವರ ಆದ್ಯತೆಯ ಯೋಜನೆ ಇದಾಗಿದ್ದು ಬಡವರಿಗೆ ಮನೆ ಲಭಿಸಬೇಕು ಎನ್ನುವುದು ಅವರ ಒತ್ತಾಸೆಯಾಗಿದೆ. ಅದರಂತೆ ಯೋಜನೆಗೆ ವೇಗ ತರುವುದಕ್ಕೆ ಕಂದಾಯ ಅಧಿಕಾರಿಗಳನ್ನೂ ಸೇರಿಸಿಕೊಂಡು ತಂಡ ರಚಿಸಬೇಕು, ಮಳೆಗಾಲಕ್ಕೆ ಮೊದಲು ಕೆಲವಾದರೂ ಫಲಾನುಭವಿಗಳಿಗೆ ಮನೆ ಲಭಿಸುವಂತೆ ಮಾಡಬೇಕು ಎಂದರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯಾಪಿತಿಯ ವಸತಿ ಯೋಜನೆಗಳಲ್ಲಿ ಫಲಾನುಭವಿಯು ಒಂದು ವರ್ಷವಾದರೂ ಮನೆ ನಿರ್ಮಾಣ ಶುರು ಮಾಡದಿರುವ ಪ್ರಸಂಗದಲ್ಲಿ ಅದನ್ನು ಲಾಕ್ ಮಾಡಲಾಗುತ್ತದೆ. ಯಾವ ಕಾರಣಕ್ಕೆ ಫಲಾನುಭವಿಗಳು ಕೆಲಸ ಶುರು ಮಾಡಿಲ್ಲ, ಅಥವಾ ವಿವಿಧ ಹಂತಗಳಲ್ಲೇ ಬಾಕಿ ಉಳಿಸಿದ್ದಾರೆ ಎನ್ನುವುದನ್ನು ಅಧಿಕಾರಿಗಳು ತಿಳಿದುಕೊಳ್ಳಿ, ಬಳಿಕ ಲಾಕ್ ತೆರವುಗೊಳಿಸುವಂತೆ ನಿಗಮವನ್ನು ಕೇಳಿಕೊಳ್ಳಬಹುದು ಎಂದರು.

ಹಣದ ತೊಂದರೆಯಿಂದ ಪಂಚಾಂಗವನ್ನೂ ನಿರ್ಮಿಸಲಾಗದ ಫಲಾನುಭವಿಗಳಿಗೆ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಸಾಲದ ನೆರವು ತೆಗೆಸಿಕೊಡುವಂತೆಯೂ ಅವರು ಸೂಚಿಸಿದರು.

ಕೇಂದ್ರದ ಪುರಸ್ಕೃತ ವಸತಿ, ಕುಡಿಯುವ ನೀರು ಮುಂತಾದ ಯೋಜನೆಗಳನ್ನು ಚುರುಕುಗೊಳಿಸಲು ಪ್ರತಿ ತಿಂಗಳು ಸಭೆ ನಡೆಸಬೇಕು. ತಡವಾಗಿ ರಾತ್ರಿಯಾದರೂ ನಾನುಸಭೆ ನಡೆಸುತ್ತೇನೆ ಎಂದು ನಳಿನ್ ತಿಳಿಸಿದರು.

ಬಿ.ಸಿ.ರೋಡ್ ಪೂಂಜಾಲಕಟ್ಟೆ ಮಧ್ಯೆ ಚತುಷ್ಪಥ ಹೆದ್ದಾರಿ ನಿರ್ಮಾಣದ ಕೆಲಸ ಜೂನ್‌ವರೆಗೆ ವಿಸ್ತರಣೆಯಾಗಿದ್ದು, ಇನ್ನಷ್ಟು ವಿಸ್ತರಣೆ ಅವಕಾಶ ನೀಡಬಾರದು, ಅದರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕು ಎಂದು ಸಂಸದ ನಳಿನ್ ಹೆದ್ದಾರಿ ಇಲಾಖೆ ಕಾರ್ಯಕಾರಿ ಇಂಜಿನಿಯರ್‌ಗೆ ತಿಳಿಸಿದರು.

ಹೆದ್ದಾರಿ ಕೆಲಸ ಆಗುವಲ್ಲಿ ಯಾವುದೇ ಸಿಗ್ನಲ್ ವ್ಯವಸ್ಥೆ ಇಲ್ಲ, ಇದರಿಂದ ರಾತ್ರಿ ವಾಹನ ಚಾಲನೆ ಮಾಡುವುದು ಅಪಾಯಕಾರಿಯಾಗಿದೆ, ಅಪಘಾತಗಳು ಸಂಭವಿಸುತ್ತವೆ. ಜೂನ್‌ನೊಳಗೆ ಎಲ್ಲಾ ಕಾಮಗಾರಿ ಮುಗಿಸಬೇಕು. ಬಳಿಕ ಮಳೆಗಾಲದಲ್ಲಿ ಸಂಭವಿಸುವ ಅಪಘಾತಗಳಿಗೆ ಹೆದ್ದಾರಿ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು. ಪ್ರತಿ ತಿಂಗಳೂ ರಸ್ತೆ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಸಭೆ ನಡೆಸಲಾಗುತ್ತಿದ್ದು, ಅದಕ್ಕೆ ಕಡ್ಡಾಯವಾಗಿ ಹೆದ್ದಾರಿ ಇಲಾಖೆಯವರು ಬಂದು ಅಲ್ಲಿ ನೀಡಲಾಗುವ ಸಲಹೆಗಳನ್ನು ಕಾರ್ಯಗತಗೊಳಿಸಬೇಕು, ಅನುದಾನದ ಅವಶ್ಯಕತೆ ಇದ್ದಲ್ಲಿ ತಿಳಿಸಬೇಕು, ಹೆದ್ದಾರಿ ಇಲಾಖೆ ಮಾತ್ರವಲ್ಲದೆ ಸಾರಿಗೆ ಇಲಾಖೆಯಿಂದಲೂ ಅನುದಾನದ ವ್ಯವಸ್ಥೆ ಮಾಡಿಸುವುದಕ್ಕೆ ಅವಕಾಶಗಳಿವೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಮಾ.1 ರ ಬಳಿಕ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಸಾಧ್ಯತೆ
ಕೊರೊನ ಲಸಿಕೆಯ ಎರಡನೇ ಹಂತ ಪ್ರಗತಿಯಲ್ಲಿದ್ದು ಮಾ.1 ರ ಬಳಿಕ ಸಾರ್ವಜನಿಕರಿಗೆ ಲಸಿಕೆ ನೀಡಿಕೆ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸರಕಾರದಿಂದ ಮಾರ್ಗಸೂಚಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದರು.

ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗಿದೆ. ದ್ವಿತೀಯ ಹಂತದಲ್ಲಿ ಸರಕಾರಿ ನೌಕರರಿಗೆ ಲಸಿಕೆ ನೀಡಲಾಗುತ್ತಿದೆ. ಮೂರನೇ ಹಂತದಲ್ಲಿ ಸಾರ್ವಜನಿಕರಿಗ ನೀಡಲಾಗುವುದು ಎಂದವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 52381 ಲಸಿಕೆ ಗುರಿಯಲ್ಲಿ ಈವರೆಗೆ 25,842 ಮಂದಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 237 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ಇದರಲ್ಲಿ 165 ಮಂದಿ ಮನೆಯಲ್ಲಿ ಹಾಗೂ 72 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಗಡಿಭಾಗದ 50 ಶಾಲೆಗಳಲ್ಲಿ ವಿದ್ಯಾಗಮ ಆರಂಭವಿಲ್ಲ
ಕೇರಳ ಭಾಗದಲ್ಲಿ ಕೊರೊನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗಡಿ ಭಾಗದ 50 ಶಾಲೆಗಳಲ್ಲಿ ರೆಗ್ಯುಲರ್ ತರಗತಿಗಳು ಇರುವುದಿಲ್ಲ ಬೆಳಗ್ಗೆ 9 ರಿಂದ 12 ಗಂಟೆಯವರಿಗೆ ವಿದ್ಯಾಗಮ ನಡೆಸಲಾಗುವುದು. ಆದರೆ ರೆಗ್ಯುಲರ್ ತರಗತಿಗಳನ್ನು ಆರಂಭಿಸುವಂತೆ ಪೋಷಕರು ಹಾಗೂ ಎಸ್‌ಡಿಎಂಸಿಗಳಿಂದ ಬೇಡಿಕೆ ವ್ಯಕ್ತವಾಗಿದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ತಿಳಿಸಿದರು. ಜಿಲ್ಲೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.75 ರಷ್ಟಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಡಾ. ರಾಮಚಂದ್ರ ಬಾಯರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News