ಲಂಕಾದ ಬೌಲಿಂಗ್ ಕೋಚ್ ಚಮಿಂಡ ವಾಸ್ ರಾಜೀನಾಮೆ

Update: 2021-02-23 04:56 GMT

 ಕೊಲಂಬೊ: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನೇಮಕಗೊಂಡಿದ್ದ ಶ್ರೀಲಂಕಾ ತಂಡದ ಹೊಸ ವೇಗದ ಬೌಲಿಂಗ್ ಕೋಚ್ ಚಮಿಂಡ ವಾಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 ಮಾಜಿ ಟೆಸ್ಟ್ ಆಟಗಾರ ಚಮಿಂಡ ವಾಸ್ ಅವರು ಶುಕ್ರವಾರ ಆಸ್ಟ್ರೇಲಿಯದ ಡೇವಿಡ್ ಸೆಕರ್ ಅವರಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡಿದ್ದರು. ಆದರೆ ನೇಮಕಗೊಂಡ ಮೂರೇ ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ವೇತನ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಮಿಂಡ ವಾಸ್ ಲಂಕಾ ತಂಡದೊಂದಿಗೆ ವೆಸ್ಟ್‌ಇಂಡಿಸ್‌ಗೆ ಪ್ರಯಾಣಿಸುವುದಿಲ್ಲ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.

 ಶ್ರೀಲಂಕಾ ಕ್ರಿಕೆಟ್ ತಂಡ ವಿಂಡೀಸ್‌ಗೆಪ್ರಯಾಣಿಸುವ ಮುನ್ನಾ ದಿನದಂದು ವಾಸ್ ವೈಯಕ್ತಿಕ ಲಾಭಕ್ಕಾಗಿ ಹಠಾತ್ ಮತ್ತು ಬೇಜವಾಬ್ದಾರಿಯುತ ಕ್ರಮವನ್ನು ಕೈಗೊಂಡಿ ರುವುದು ಸರಿಯಲ್ಲ ಎಂದು ಮಂಡಳಿ ಹೇಳಿದೆ.

‘‘ನಾನು ಎಸ್‌ಎಲ್‌ಸಿಗೆ ವಿನಮ್ರ ವಿನಂತಿಯನ್ನು ಮಾಡಿದ್ದೇನೆ ಮತ್ತು ಅವರು ಅದನ್ನು ತಿರಸ್ಕರಿಸಿದರು. ಈ ಕಾರಣದಿಂದಾಗಿ ತಾನು ರಾಜೀನಾಮೆನಿರ್ಧಾರ ಕೈಗೊಂಡೆ ಎಂದು ವಾಸ್ ಅಭಿ ಪ್ರಾಯಪಟ್ಟರು.

 ಪ್ರವಾಸವು ಶನಿವಾರ ಪ್ರಾರಂಭವಾಗಬೇಕಿತ್ತು. ಆದರೆ ಈ ತಿಂಗಳ ಆರಂಭದಲ್ಲಿ ಅಗ್ರ ಸರದಿಯ ಬ್ಯಾಟ್ಸ್‌ಮನ್ ಲಹಿರು ತಿರುಮನ್ನೆ ಮತ್ತು ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಅವರು ಕೋವಿಡ್ -19 ಸೋಂಕಿಗೆ ಒಳಗಾದ ನಂತರ ಮುಂದೂಡಲಾಯಿತು.

 ಇದೀಗ ಇವರಿಬ್ಬರು ಚೇತರಿಸಿಕೊಂಡಿದ್ದು, ಪ್ರವಾಸಕ್ಕೆ ಸಜ್ಜಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.

 ಶ್ರೀಲಂಕಾದ ವೇಗದ ಬೌಲರ್ ಆಗಿದ್ದ ವಾಸ್ 111 ಟೆಸ್ಟ್ ಪಂದ್ಯಗಳಲ್ಲಿ 355 ವಿಕೆಟ್ ಮತ್ತು 322 ಏಕದಿನ ಪಂದ್ಯಗಳಲ್ಲಿ 400 ವಿಕೆಟ್ ಗಳಿಸಿದ್ದಾರೆ. 2009ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು.

ಶ್ರೀಲಂಕಾ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟ್ವೆಂಟಿ -20 ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‌ಗೆ ತೆರಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News