ನಟ ಶೇಖರ್ ಸುಮನ್‌ ಪುತ್ರ ಆತ್ಮಹತ್ಯೆಗೈದಿದ್ದಾರೆಂದು ಸುದ್ದಿ ಪ್ರಕಟಿಸಿದ ಝೀ ನ್ಯೂಸ್

Update: 2021-02-23 06:50 GMT

ಹೊಸದಿಲ್ಲಿ: ಬಿಜೆಪಿ ಪರ ವಾಹಿನಿಯೆಂದೇ ಜನರ ನಡುವೆ ಪ್ರಚಾರದಲ್ಲಿರುವ ಝೀ ನ್ಯೂಸ್‍ ನ ಪರವಾನಿಗೆ ರದ್ದುಗೊಳಿಸಬೇಕೆಂದು ಹಿರಿಯ ನಟ  ಶೇಖರ್ ಸುಮನ್ ಅವರು ಆಗ್ರಹಿಸಿದ್ದಾರೆ. ಶೇಖರ್ ಅವರ ಪುತ್ರ ಅಧ್ಯಯನ್ ಸುಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುಳ್ಳು ಸುದ್ದಿಯನ್ನು ಇತ್ತೀಚೆಗೆ ಝೀ ಪ್ರಸಾರ ಮಾಡಿದ್ದ ಕಾರಣದಿಂದಾಗಿ ಶೇಖರ್‌ ಸುಮನ್‌ ಈ ಹೇಳಿಕೆ ನೀಡಿದ್ದಾರೆ.

ಝೀ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಿಗೇ ಕೆಂಡಾಮಂಡಲರಾದ ಅಧ್ಯಯನ್ ಟ್ವೀಟ್ ಮಾಡಿ "ಝೀ ನ್ಯೂಸ್ ಅದ್ಹೇಗೆ ಇಂತಹ ಸುದ್ದಿ ಪ್ರಕಟಿಸಿದೆ?. ನಿಮ್ಮಂತಹ ಅಸಹ್ಯಕರ ಜನರಿಂದ ನನ್ನ ಕುಟುಂಬಕ್ಕೆ ನೋವುಂಟಾಗಿದೆ ಇದಕ್ಕಾಗಿ ನೀವು ಬೆಲೆ ತೆರಬೇಕಿದೆ. ಈ ಜನರು ಟಿಆರ್ಪಿಗಾಗಿ ಏನು ಬೇಕಾದರೂ ಮಾಡುತ್ತಾರೆಂದು ಜಗತ್ತಿಗೆ ಗೊತ್ತಾಗುವಂತಾಗಲು ನನಗೆ ಸಹಾಯ ಮಾಡಿ" ಎಂದು ಬರೆದಿದ್ದಾರೆ.

ತರುವಾಯ ಶೇಖರ್ ಸುಮನ್ ಟ್ವೀಟ್ ಮಾಡಿ "ಅವರ ಲೈಸನ್ಸ್ ರದ್ದುಗೊಳಿಸಬೇಕಿದೆ. ಹಲವು ರೀತಿಯಲ್ಲಿ ವ್ಯಾಪಕ ಹಾನಿಯುಂಟು ಮಾಡುವ ನಕಲಿ ಸುದ್ದಿಗಳ ಹಿಂದಿನ ಜನರಿಗೆ ಶಿಕ್ಷೆ ನೀಡಬೇಕೆಂದು ಪ್ರಧಾನಿ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ಬರೆದಿದ್ದಾರೆ.

ಅದೇ ಸಮಯ ಅಧ್ಯಯನ್ ಆತ್ಮಹತ್ಯೆಯ ಸುಳ್ಳು ಸುದ್ದಿಯಿಂದಾಗಿ ಕುಟುಂಬಕ್ಕಾದ ನೋವಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲು ತಮಗೆ ಕರೆ ಮಾಡಿದ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಶೇಖರ್ ಸುಮನ್ ಧನ್ಯವಾದ ಹೇಳಿದ್ದಾರೆ.

ಸುಳ್ಳು ಸುದ್ದಿ ಪ್ರಸಾರ ಮಾಡಿದ ಝೀ ನ್ಯೂಸ್ ವಿರುದ್ಧ ನೆಟ್ಟಿಗರೂ ವ್ಯಾಪಕವಾಗಿ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News