ಇಂಧನ ಬೆಲೆಯೇರಿಕೆಗೆ ಕಡಿವಾಣವೇ ಇಲ್ಲ: ಮುಂಬೈಯಲ್ಲಿ ಶತಕ ಬಾರಿಸಲು ಮೂರೇ ಹೆಜ್ಜೆ ಬಾಕಿ

Update: 2021-02-23 15:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.23: ಎರಡು ದಿನಗಳ ವಿರಾಮದ ಬಳಿಕ ಮಂಗಳವಾರ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 35 ಪೈಸೆ ಹೆಚ್ಚಿಸಲಾಗಿದ್ದು,ಇದರೊಂದಿಗೆ ಚಿಲ್ಲರೆ ಬೆಲೆಗಳು ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿವೆ. ದಿಲ್ಲಿಯಲ್ಲಿ ಈಗ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ 90.93 ರೂ.ಮತ್ತು 81.32 ರೂ.ಆಗಿವೆ.

ಮುಂಬೈಯಲ್ಲಿ ಮಂಗಳವಾರ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ 97.34 ರೂ. ಮತ್ತು 88.44 ರೂ.ಗೇರಿದೆ.

ಫೆ.21 ಮತ್ತು 22ರಂದು ಎರಡು ದಿನಗಳ ವಿರಾಮಕ್ಕೆ ಮುನ್ನ ಸತತ 12 ದಿನಗಳ ಕಾಲ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿತ್ತು.

ಕಳೆದ ವಾರ ಟೆಕ್ಸಾಸ್‌ನಲ್ಲಿ ತೀವ್ರ ಮಂಜಿನಿಂದಾಗಿ ತೈಲ ಉತ್ಪಾದನೆಯು ಸ್ಥಗಿತಗೊಂಡಿದೆ. ಇದರಿಂದಾಗಿ ಅಮೆರಿಕದ ಉತ್ಪಾದನೆ ಪ್ರಮಾಣವು ಹಳಿಗೆ ಮರಳಲು ವಿಳಂಬವಾಗುತ್ತಿರುವುದರಿಂದ ಮಂಗಳವಾರ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 66 ಡಾ.ಗಳನ್ನು ದಾಟಿದೆ.

ಫೆಬ್ರವರಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 4.63 ರೂ.ಮತ್ತು ಡೀಸೆಲ್ ಬೆಲೆ ಪ್ರತಿ ಲೀ.ಗೆ 4.84 ರೂ.ಏರಿಕೆಯಾಗಿವೆ. 2021ರಲ್ಲಿ ಇವೆರಡೂ ಇಂಧನಗಳ ಬೆಲೆಗಳಲ್ಲಿ ಅನುಕ್ರಮವಾಗಿ ಪ್ರತಿ ಲೀ.ಗೆ 7.22 ರೂ. ಮತ್ತು 7.45 ರೂ.ಗಳ ಒಟ್ಟು ಏರಿಕೆಯಾಗಿವೆ.

ಇಂಧನಗಳ ಮೇಲೆ ಅತ್ಯಧಿಕ ವ್ಯಾಟ್ ವಿಧಿಸುತ್ತಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ಕೆಲವೆಡೆಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ಶತಕವನ್ನು ಬಾರಿಸಿ ಮುನ್ನುಗ್ಗುತ್ತಿದೆ.

ಸ್ಥಳಿಯ ತೆರಿಗೆಗಳು ಮತ್ತು ಸಾಗಾಣಿಕೆ ವೆಚ್ಚಗಳನ್ನು ಅವಲಂಬಿಸಿ ಇಂಧನಗಳ ಚಿಲ್ಲರೆ ಮಾರಾಟ ದರಗಳು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತವೆ.

ಕಳೆದ ವರ್ಷದ ಎಪ್ರಿಲ್-ಮೇ ತಿಂಗಳಿನಲ್ಲಿ ಜಾಗತಿಕ ತೈಲ ಬೆಲೆಗಳು ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದಾಗ ಅದರ ಲಾಭವನ್ನು ಜನರಿಗೆ ವರ್ಗಾಯಿಸದ ಮೋದಿ ಸರಕಾರವು ಬೊಕ್ಕಸದ ಆದಾಯವನ್ನು ಹೆಚ್ಚಿಸಿಕೊಳ್ಳಲು ತೆರಿಗೆಗಳನ್ನು ಏರಿಸಿತ್ತು. ಈಗ ಹೆಚ್ಚಿನ ಬೇಡಿಕೆಯಿಂದಾಗಿ ಜಾಗತಿಕ ಬೆಲೆಗಳು ಪುಟಿದೆದ್ದಿದ್ದರೂ ಸರಕಾರವು ದಾಖಲೆಯ ಮಟ್ಟದಲ್ಲಿರುವ ತೆರಿಗೆಗಳನ್ನು ತಗ್ಗಿಸುವ ಗೋಜಿಗೆ ಹೋಗಿಲ್ಲ.

ಪೆಟ್ರೋಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಶೇ.60 ಮತ್ತು ಡಿಸೇಲ್‌ನ ಮಾರಾಟ ದರದಲ್ಲಿ ಶೇ.54 ಕೇಂದ್ರ ಮತ್ತು ರಾಜ್ಯ ಸರಕಾರಗಳ ತೆರಿಗೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News