ಮಂಗಳೂರಲ್ಲಿ ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಕೆ ಪ್ರಕರಣ ಹೆಚ್ಚಳ: ದಿಲ್ಲಿಯ ವ್ಯಕ್ತಿ ಸಹಿತ ಇಬ್ಬರು ವಶಕ್ಕೆ

Update: 2021-02-23 15:32 GMT

ಮಂಗಳೂರು, ಫೆ.23: ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಹಣ ವಂಚಿಸುವ ಬೃಹತ್ ಜಾಲವೊಂದು ಮಂಗಳೂರಲ್ಲಿ ಪತ್ತೆಯಾಗಿದೆ. ತಿಂಗಳವೊಂದರಲ್ಲೇ ಹಲವು ಪ್ರಕರಣಗಳು ದಾಖಲಾಗಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ನಗರದ ಮಂಗಳಾದೇವಿ ಹಾಗೂ ಚಿಲಿಂಬಿಯಲ್ಲಿ ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ವಂಚಿಸುತ್ತಿದ್ದ ಆರೋಪದಲ್ಲಿ ಹಲವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಹಣ ವಂಚನೆಯ ಬೃಹತ್ ಜಾಲ ಪತ್ತೆಯ ತನಿಖಾ ದೃಷ್ಟಿಯಿಂದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಕರಣ 1: ನಗರದ ಮಂಗಳಾದೇವಿಯ ಪೆಟ್ರೋಲ್ ಬಂಕ್ ಎದುರಿನಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ದುಷ್ಕರ್ಮಿಗಳು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ರವಿವಾರ (ಫೆ.21) ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಅವರನ್ನು ಸೆರೆ ಹಿಡಿಯಲು ಹೋದಾಗ ದುಷ್ಕರ್ಮಿಗಳು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕರು ಇಬ್ಬರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿವೆ.

ಈ ಘಟನೆ ರವಿವಾರ ನಡೆದಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾದ ಬಳಿಕ ಸೋಮವಾರ ಬೆಳಗ್ಗೆ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಳಿಕ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ದಿನೇಶ್ ಯು. ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ 2: ಚಿಲಿಂಬಿಯ ಗಾಂಧೀನಗರದ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿಯೂ ಅದೇ ದಿನ (ಫೆ.21) ಬೆಳಗ್ಗೆ 9:47ಕ್ಕೆ ದುಷ್ಕರ್ಮಿಗಳು ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ವಂಚನೆಗೆ ವಿಫಲ ಯತ್ನ ನಡೆಸಿದ್ದಾರೆ. ಮರುದಿನ (ಫೆ.22) ಬ್ಯಾಂಕ್‌ನ ಕಾರ್ಯ ನಿರ್ವಹಣೆಯ ಸಮಯ ದಲ್ಲಿ ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿರುವುದು ಪತ್ತೆಯಾಗಿದೆ. ಬಳಿಕ ಬ್ಯಾಂಕ್ ಅಧಿಕಾರಿ ಕೆನರಾ ಬ್ಯಾಂಕ್‌ನ ಮುಖ್ಯ ಪ್ರಬಂಧಕ ರಾಜೇಶ್ ಪೈ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಾಂಧಿನಗರದ ಇದೇ ಎಟಿಎಂನಲ್ಲಿ 2020ರ ಡಿಸೆಂಬರ್ 3ರಂದು ಹಣ ವಂಚನೆಯ ಘಟನೆ ನಡೆದಿತ್ತು. ಆ ದಿನವೂ ಎಟಿಎಂನಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಗ್ರಾಹಕರ ಹಣವನ್ನು ದುಷ್ಕರ್ಮಿಗಳು ವಂಚಿಸಿದ್ದರು. ಎಲ್ಲ ಘಟನೆಗಳೂ ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಿಲ್ಲಿ ಮೂಲದ ವ್ಯಕ್ತಿ ಸಹಿತ ಇಬ್ಬರು ವಶಕ್ಕೆ:  ಮಂಗಳೂರು ನಗರದ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಕೃತ್ಯಕ್ಕೆ ಸಂಬಂಧಿಸಿ ದಿಲ್ಲಿ ಮೂಲದ ವ್ಯಕ್ತಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ದಿಲ್ಲಿ ಹಾಗೂ ಇನ್ನೊಬ್ಬಾತ ಕಾಸರಗೋಡಿನ ನಿವಾಸಿ ಎಂದು ತಿಳಿದು ಬಂದಿದೆ. ಸ್ಕಿಮ್ಮಿಂಗ್ ಕೃತ್ಯದಲ್ಲಿ ಒಟ್ಟು 6 ಮಂದಿಯ ತಂಡದ ಕೃತ್ಯ ಶಾಮೀಲಾಗಿದ್ದು, ಕೃತ್ಯದ ಕಿಂಗ್‌ಪಿನ್ ಸೇರಿದಂತೆ ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ.

ಸಾರ್ವಜನಿಕರಿಂದ ಶ್ಲಾಘನೆ: ಸ್ಕಿಮ್ಮಿಂಗ್ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಗರದಲ್ಲಿ ವ್ಯಾಪಿಸಿದ ಸ್ಕಿಮ್ಮಿಂಗ್ ಜಾಲವೊಂದನ್ನು ಬೇಧಿಸಿದಂತಾಗಿದೆ.

ಏನಿದು ಸ್ಕಿಮ್ಮಿಂಗ್?

ಎಟಿಎಂ ಯಂತ್ರಗಳಲ್ಲಿ ದುಷ್ಕರ್ಮಿಗಳು ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳವು ಮಾಡಲಾಗುತ್ತದೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣವು ಬಳಕೆದಾರರು ಎಟಿಎಂ ಕಾರ್ಡ್ ಸ್ವೈಪ್ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ. ನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿದ್‌ಡ್ರಾ ಮಾಡುವುದಕ್ಕೆ ‘ಸ್ಕಿಮ್ಮಿಂಗ್’ ಎಂದು ಕರೆಯಲಾಗುತ್ತದೆ.

ಗ್ರಾಹಕರು ಏನು ಮಾಡಬೇಕು ?

ಎಟಿಎಂನಲ್ಲಿ ಶಂಕಾಸ್ಪದವಾಗಿ ಯಾವುದಾದರೂ ಉಪಕರಣ ಜೋಡಣೆಯಾಗಿದೆಯೇ ಎನ್ನುವುದನ್ನು ಗ್ರಾಹಕರು ಮೊದಲು ಪರಿಶೀಲನೆ ಮಾಡಬೇಕು. ಈ ಸಂದರ್ಭದಲ್ಲಿ ಏನಾದರೂ ಅನುಮಾನ ಬಂದಲ್ಲಿ, ಆ ಜಾಗದಲ್ಲಿ ಕಾರ್ಡ್ ಬಳಕೆ ಮಾಡಕೂಡದು. ಕೂಡಲೇ ಸಮೀಪದ ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News