ದ.ಕ ಜಿಲ್ಲೆಯಲ್ಲಿ ಐ.ಟಿ.ಪಾರ್ಕ್ ನಿರ್ಮಾಣ : ಡಾ. ಅಶ್ವಥ್ ನಾರಾಯಣ

Update: 2021-02-24 08:07 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಐದು ಎಕ್ರೆ ಪ್ರದೇಶದಲ್ಲಿ ಐ.ಟಿ.ಸಾಫ್ಟ್‌ವೇರ್ ತಂತ್ರಜ್ಞಾನದ ಪಾರ್ಕ್ ನಿರ್ಮಾಣಕ್ಕೆ ಸರಕಾರ ಬದ್ಧವಾಗಿದೆ ಎಂದು ಉಪ ಮುಖ್ಯ ಮಂತ್ರಿ ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಅವರು ಇಂದು ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಕಿಯೋನಿಕ್ಸ್ ವತಿಯಿಂದ  ಹಮ್ಮಿಕೊಂಡ ಒಂದು ದಿನದ ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರ ಸಮಾವೇಶವನ್ನು (ಇನ್ನೋವೇಶನ್ ಕಾನ್ ಕ್ಲೇವ್ ) ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಂಗಳೂರು ಜಾಗತಿಕವಾಗಿ ಐ.ಟಿ.ಕ್ಷೇತ್ರದ ಮೂಲಕವಾಗಿ ಗುರುತಿಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ. ಆವಿಷ್ಕಾರ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ನಿಟ್ಟಿನಲ್ಲಿ ಒತ್ತು ನೀಡುತ್ತಿದೆ ಎಂದು ಡಾ.ಅಶ್ವಥ ನಾರಾಯಣ ತಿಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ನೀತಿಗೆ ಹೆಚ್ಚಿನ ಒತ್ತು ನೀಡಿದಾಗ ಸಮಾಜದ ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಲಿದೆ. ಬೆಂಗಳೂರುನಿಂದ ಹೊರ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸರಕಾರ ಒತ್ತು ನೀಡುತ್ತಿದೆ. ನಮ್ಮತನವನ್ನು ಉಳಿಸಿಕೊಂಡು ಪ್ರಗತಿ ಸಾಧಿಸಲು ಎಲ್ಲರ ಸಹಕಾರ ಅಗತ್ಯ. ಜಿಲ್ಲೆಯ ಬೆಳವಣಿಗೆಗೆ ಸದಾ ಸಹಕಾರ ನೀಡುವುದಾಗಿ ಡಾ.ಅಶ್ವಥ ನಾರಾಯಣ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವೇಗವಾಗಿ ಬೆಳವಣಿಗೆಹೊಂದುತ್ತಿರುವ ಜಿಲ್ಲೆಯಾಗಿದೆ. ಮುಂದಿನ ದಿನಗಳಲ್ಲಿ ತನ್ನ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಕೊಂಡು ಬೆಳೆಯುವಂತಾಗಲಿ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸುಮಾರು 10 ಸಾವಿರ ಎಕ್ರೆ ವಿಸ್ತೀರ್ಣದ ಲ್ಯಾಂಡ್ ಬ್ಯಾಂಕ್ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡುತ್ತಾ, ಬಂಟ್ವಾಳದ ರಾಮಕೃಷ್ಣ ಬಾಳಿಗರ ಮೂಲಕ ಆರಂಭಗೊಂಡ ಕಿಯೋನಿಕ್ಸ್ ಜಾಗತಿಕವಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡ ಬೇಕು. ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಗೆ ಕಾರಣವಾಗಬೇಕು ಎಂದರು.

ಸಮಾವೇಶದ ಸಂಪನ್ಮೂಲ ವ್ಯಕ್ತಿ ಸ್ಟೀವನ್ ಡೆವಿಡ್ ಮಾತನಾಡುತ್ತಾ ಮಂಗಳೂರು ಎಲೆಕ್ಟ್ರಾನಿಕ್, ತಂತ್ರಜ್ಞಾನದಲ್ಲಿ ಜಾಗತಿಕ ಕೇಂದ್ರವಾಗಿ ಗುರುತಿಸುವಂತಾಗಬೇಕು ಎಂದರು. ಇದೆ ಸಂದರ್ಭದಲ್ಲಿ ಎನ್ಎಂಪಿಟಿ ಸೇರಿದಂತೆ ವಿವಿಧ ಉದ್ಯಮ ಸಂಸ್ಥೆಗಳ ಜೊತೆ 1400 ಕೋಟಿ ರೂ. ಒಡಂಬಡಿಕೆಯನ್ನು ಸರಕಾರದ ಜೊತೆ ಮಾಡಿಕೊಳ್ಳಲಾಯಿತು.

ಸಮಾವೇಶದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಾಸಕ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ,ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕಿಯೋನಿಕ್ಸ್ ನ  ಸಿದ್ದರಾಮಪ್ಪ, ಎನ್.ಎಂ.ಪಿ.ಟಿ. ಅಧ್ಯಕ್ಷ ಎ.ವಿ. ರಮಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News