ಬಡಗಬೆಳ್ಳೂರು: ತರಗತಿ ಕೊಠಡಿ ನವೀಕರಿಸಿ ಶಾಲೆಗೆ ಹಸ್ತಾಂತರ

Update: 2021-02-24 09:59 GMT

ಬಂಟ್ವಾಳ: ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್‍ನ ಸಾಮಾಜಿಕ ಚಟುವಟಿಕೆ ಯೋಜನೆಯಡಿ ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಒಂದನೇ ತರಗತಿಯ ಕೊಠಡಿಗೆ ಟೈಲ್ಸ್, ಪೈಂಟಿಂಗ್, ವಿದ್ಯುತ್ ಇನ್ನಿತರ ನವೀಕರಣ ಕಾಮಗಾರಿ ಮಾಡಿ ಶಾಲೆಗೆ ರವಿವಾರ ಹಸ್ತಾಂತರಿಸಲಾಯಿತು.

ಗ್ರಾಮಾಂತರ ಭಾಗದಲ್ಲಿರುವ ಮೂಲಭೂತ ಸೌಲಭ್ಯ ವಂಚಿತ ಶಾಲೆಗಳ ವಿದ್ಯಾರ್ಥಿಗಳ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ರೋಟರಿ ಕ್ಲಬ್ ಸಾಮಾಜಿಕ ಚಟುವಟಿಕೆ ಯೋಜನೆಯಡಿ ಕೈಗೆತ್ತಿಕೊಂಡಿದೆ. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ನಗರದ ಸಂಸ್ಥೆಯು ಊರಿನ ಶಾಲೆಗೆ ನೀಡಿರುವ ಕೊಡುಗೆಗೆ ಪೂರಕವಾಗಿ ರೋಟರಿ ಬಂಟ್ವಾಳ ಟೌನ್‍ ಪದಾಧಿಕಾರಿಗಳು ಹಾಗೂ ಹಿತೈಶಿಗಳ ಸೇವೆಯನ್ನು ಶ್ಲಾಘಿಸಲಾಯಿತು.

ಶತಮಾನೋತ್ಸವ ಹಿನ್ನೆಲೆಯಲ್ಲಿ ಊರಿನ ಹಿರಿಯ, ಕಿರಿಯರು ಸೇರಿ ಶತಮಾನೋತ್ಸವ ಕಟ್ಟಡ ಸಮಿತಿಯನ್ನು ರಚಿಸಲಾಗಿದ್ದು, ಈಗಾಗಲೇ ಶತಮಾನೋತ್ಸವ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳು ಪಾಠ ಕೇಳುವ ಪರಿಸರ ಸುಸಜ್ಜಿತವಾಗಿದ್ದರೆ ಅವರಿಗೆ ಕಲಿಯಲು ಆಸಕ್ತಿ ಬರುತ್ತದೆ. ಒಂದನೇ ತರಗತಿಗೆ ಮಕ್ಕಳು ಬರಲು ಆರಂಭಿಕ ದಿನಗಳಲ್ಲಿ ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸ್ನೇಹಿ ಪರಿಸರ ಇದ್ದರೆ ಒಂದೆರೆಡು ದಿನಗಳಲ್ಲಿ ಮಕ್ಕಳು ಶಾಲೆಗೆ ಬರಲು ಆಸಕ್ತಿ ತೋರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪದ್ಮನಾಭ ರೈ ಹೇಳಿದರು.

ಸಂಚಾಲಕ ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು. ರೋಟರಿ ಬಂಟ್ವಾಳ ನಗರದ ಕಾರ್ಯದರ್ಶಿ ಕಿಶೋರ್ ವಂದಿಸಿದರು. ಕಟ್ಟಡ ಸಮಿತಿ ಅಧ್ಯಕ್ಷ ರಮೇಶ್‍ ಚಂದ್ರ ಭಂಡಾರಿ, ಉಪಾಧ್ಯಕ್ಷ ದಯಾನಂದ್ ಬಂಗೇರಾ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಧಾಕರ್ ಪೂಂಜಾ, ಆ್ಯನ್ಸ್ ಅಧ್ಯಕ್ಷೆ ಸವಿತಾ ಸಿ. ಶೆಟ್ಟಿ, ರೋಟರಿ ಸದಸ್ಯ, ನ್ಯಾಯವಾದಿ ದಯಾನಂದ ರೈ, ಆಶಾ ಡಿ.ರೈ, ಜೀವನ್ ಲಾಯಿಡ್ ಪಿಂಟೊ, ಯಶವಂತ ವಿಟ್ಲ, ರೋಟರಿ ಕ್ಲಬ್ ಬಂಟ್ವಾಳ ಟೌನ್‍ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚ್ಚೀಂದ್ರನಾಥ ರೈ, ಕಾರ್ಯದರ್ಶಿ ವಿಶ್ವಂಬರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News