ಪ್ರಜ್ಞಾ ಸಿಂಗ್‌ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ಆರೋಪ: ಮಹಾರಾಷ್ಟ್ರ ಡಿಜಿಪಿಗೆ ಸಮನ್ಸ್

Update: 2021-02-24 15:43 GMT

ಮುಂಬೈ, ಫೆ.24: ಬಂಧನದಲ್ಲಿದ್ದ ಸಂದರ್ಭ ತನಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರು ಎಂಬ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಿಗೆ ರಾಜ್ಯ ಮಾನವಹಕ್ಕುಗಳ ಆಯೋಗ ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳು ಹೇಳಿವೆ.

2018ರ ಅಕ್ಟೋಬರ್‌ನಲ್ಲಿ ಖಾಸಗಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತನಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂದು ಪ್ರಜ್ಞಾ ಸಿಂಗ್ ಆರೋಪಿಸಿದ್ದರು. ಬಳಿಕ ವಕೀಲ ಆದಿತ್ಯ ಮಿಶ್ರ ರಾಷ್ಟ್ರೀಯ ಮಾನವಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ)ಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಪ್ರಕರಣವನ್ನು ಮಹಾರಾಷ್ಟ್ರ ರಾಜ್ಯ ಮಾನವಹಕ್ಕು ಆಯೋಗಕ್ಕೆ ವರ್ಗಾಯಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಜ್ಯ ಮಾನವಹಕ್ಕು ಆಯೋಗ, ಎಪ್ರಿಲ್ 6ರಂದು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಸಮನ್ಸ್ ನೀಡಿದೆ. 2018ರಲ್ಲಿ ಮಾಲೆಗಾಂವ್‌ನ ಮಸೀದಿಯ ಬಳಿ ಸಂಭವಿಸಿದ್ದ ಬಾಂಬ್‌ಸ್ಫೋಟದಲ್ಲಿ 6 ಮಂದಿ ಮೃತರಾಗಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಗಳಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News