ಖಾಸಗೀಕರಣ ಮಂತ್ರ ಜಪಿಸಿದ ಮೋದಿ : ‘ಉದ್ಯಮಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ’

Update: 2021-02-24 16:43 GMT

ಹೊಸದಿಲ್ಲಿ,ಫೆ.24: ಸಾರ್ವಜನಿಕ ರಂಗದ ಉದ್ಯಮಗಳ ಖಾಸಗೀಕರಣದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮತ್ತೊಮ್ಮೆ ಪ್ರಬಲವಾಗಿ ಧ್ವನಿಯೆತ್ತಿದ್ದು, ಉದ್ಯಮ,ವಹಿವಾಟುಗಳನ್ನು ನಡೆಸುವುದು ಸರಕಾರದ ಕೆಲಸವಲ್ಲವೆಂದು ಹೇಳಿದ್ದಾರೆ.

 ಈ ವರ್ಷದ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ವಿವಿಧ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಿ, ಕೇಂದ್ರ ಸರಕಾರವು ‘ನಗದೀಕರಣ ಹಾಗೂ ಆಧುನೀಕರಣ’ ಎಂಬ ಮಂತ್ರದೊಂದಿಗೆ ಮುನ್ನಡೆಯಲಿದೆಯೆಂದರು.
 ಹೂಡಿಕೆ ಹಾಗೂ ಸಾರ್ವಜನಿಕ ಅಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಆಯೋಜಿಸಿದ್ದ ಖಾಸಗೀಕರಣ ಕುರಿತ ವೆಬಿನಾರ್ನಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
 ಖಾಸಗೀಕರಣದಿಂದಾಗಿ ಕೇಂದ್ರ ಸರಕಾರವು ಧನಸಂಪಾದನೆಯಾಗಲಿದೆ. ಕೇಂದ್ರ ಸರಕಾರ ತೆರವುಗೊಳಿಸಿದ ಜಾಗವನ್ನು ಖಾಸಗಿ ವಲಯವು ತುಂಬಲಿದ್ದು, ಅದು ಅಪಾರ ಮೊತ್ತದ ಹೂಡಿಕೆ ಹಾಗೂ ಅತ್ಯುತ್ತಮವಾದ ಜಾಗತಿಕ ಔದ್ಯಮಿಕ ಆಚರಣೆಗಳನ್ನು ತರಲಿದೆ ಎಂದವರು ಹೇಳಿದರು.
 ಖಾಸಗೀಕರಣವನ್ನು ಪ್ರಬಲವಾಗಿ ಪ್ರತಿಪಾದಿಸಿದ ಪ್ರಧಾನಿ, ಸಾರ್ವಜನಿಕ ರಂಗದ ಹಲವಾರು ಉದ್ಯಮಗಳು ನಷ್ಟದಲ್ಲಿ ನಡೆಯುತ್ತಿದ್ದು ಅವು ತೆರಿಗೆ ಪಾವತಿದಾರರ ಹಣವನ್ನೇ ಆಧರಿಸಿಕೊಂಡು ನಡೆಯುತ್ತಿವೆಯೆಂದವರು ಹೇಳಿದರು.

ರೋಗಗ್ರಸ್ತ ಸಾರ್ವಜನಿಕರಂಗದ ಉದ್ಯಮಗಳನ್ನು ಆರ್ಥಿಕ ನೆರವನ್ನು ನೀಡುವುದು ಆರ್ಥಿಕತೆಗೆ ಹೊರೆಯಾಗಲಿದೆ ಹಾಗೂ ಪರಂಪರಾಗತವಾದುದೆಂಬ ಏಕೈಕ ಕಾರಣಕ್ಕಾಗಿ ಅದನ್ನು ನಷ್ಟದಲ್ಲಿ ನಡೆಸಿಕೊಂಡು ಹೋಗಬಾರದೆಂದು ಪ್ರಧಾನಿ ಅಭಿಪ್ರಾಯಿಸಿದರು.
 ಖಾಸಗಿ ವಲಯವು ಉದ್ಯಮರಂಗಕ್ಕೆ ದಕ್ಷತೆಯನ್ನು ತಂದುಕೊಡಲಿದೆ ಹಾಗೂ ಉದ್ಯೋಗಗಳನ್ನು ಸೃಷ್ಟಿಸಲಿದೆಯೆಂದು ಪ್ರಧಾನಿ ಹೇಳಿದರು.
ಸರಕಾರದ ಬಳಿ ಹಲವಾರು ಸಮರ್ಥವಾಗಿ ಉಪಯೋಗವಾಗದೆ ಇರುವ ಆಸ್ತಿಗಳಿದ್ದು ಅವುಗಳ ವಿಕ್ರಯದಿಂದ 2.5 ಲಕ್ಷ ಕೋಟಿ ರೂ. ದೊರೆಯಲಿದೆಯೆಂದು ಪ್ರಧಾನಿ ಹೇಳಿದರು. ನಾಲ್ಕು ಆಯಕಟ್ಟಿನ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಲಯಗಳ ಖಾಸಗೀಕರಣವನ್ನು ನಡೆಸಲು ಸರಕಾರವು ಬದ್ಧವಾಗಿದೆಯೆಂದು ಪ್ರಧಾನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News