ಆಯುರ್ವೇದ ವೈದ್ಯರಿಗೂ ಶಸ್ತ್ರಕ್ರಿಯೆಗೆ ಅವಕಾಶ: ಕೇಂದ್ರದ ನಿರ್ಧಾರ ಸಮರ್ಥಿಸಿದ ಆಯುಷ್ ಸಚಿವ

Update: 2021-02-24 17:00 GMT

ಹೊಸದಿಲ್ಲಿ,ಫೆ.24: ಆಯುರ್ವೇದ ವೈದ್ಯರಿಗೆ ಶಸ್ತ್ರಕ್ರಿಯೆ (ಸರ್ಜರಿ) ನಡೆಸಲು ಅವಕಾಶ ನೀಡುವ ಕೇಂದ್ರ ಸರಕಾರದ ನಿರ್ಧಾವನ್ನು ಭಾರತೀಯ ವೈದ್ಯ ಸಂಘದ (ಐಎಂಎ) ವಿರೋಧವನ್ನು ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ್ ಬುಧವಾರ ತಳ್ಳಿಹಾಕಿದ್ದಾರೆ. ಆಯುರ್ವೇದ ವೈದ್ಯರೂ ಕೂಡಾ ಸರ್ಜರಿಗಳನ್ನು ನಡೆಸಲು ತರಬೇತಿಗಳನ್ನು ಪಡೆದವರಾಗಿದ್ದಾರೆಂದು ಎಂದವರು ಸಮರ್ಥಿಸಿಕೊಂಡಿದ್ದಾರೆ.

 ಅಲೋಪಥಿ ವೈದ್ಯ ಪದ್ಧತಿಗೆ ಪೂರಕವಾಗುವ ಉದ್ದೇಶದಿಂದ ಆಯುರ್ವೇದ ವೈದ್ಯರಿಗೂ ವೈದ್ಯಕೀಯ ಸರ್ಜರಿ ಮತ್ತಿತರ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದು ನಾಯ್ಕಿ ತಿಳಿಸಿದರು.

ಉತ್ತರಕನ್ನಡದ ಗೋಕರ್ಣದ ಸಮೀಪ ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡು, ಗೋವಾದ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಬುಧವಾರ ಬಿಡುಗಡೆಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

‘‘ ಅಲೋಪಥಿ ವೈದ್ಯ ಪದ್ಧತಿಗೆ ಪೂರಕವಾಗಿ ನಾವು ಭಾರತೀಯ ವೈದ್ಯ ಪದ್ಧತಿಯನ್ನು ಪರಿಚಯಿಸುತ್ತಿದ್ದೇವೆ’’ ಎಂದವರು ಹೇಳಿದರು. ಅಲೋಪತಿ ಹಾಗೂ ಆಯುರ್ವೇದ, ಈ ಎರಡೂ ರೀತಿಯ ವೈದ್ಯ ಪದ್ಧತಿಗಳ ನಡುವೆ ಯಾವುದೇ ಪೈಪೋಟಿ ಇರಕೂಡದು ಬದಲಿಗೆ ಅವೆರಡೂ ಪರಸ್ಪರರನ್ನು ಆದರಿಸಬೇಕೆಂದು ಅವರು ಹೇಳಿದರು.

 ಆಯುರ್ವೇದ ವೈದ್ಯರು, ಆಲೋಪತಿ ವೈದ್ಯರಿಗೆ ಸರಿಸಮಾನವಾದ ಶಿಕ್ಷಣವನ್ನು ಹೊಂದಿದ್ದಾರೆ ಹಾಗೂ ಅವರು ಶಸ್ತ್ರಕ್ರಿಯೆಗಳನ್ನು ನಡೆಸಲು ಕೂಡಾ ತರಬೇತಿ ಪಡೆದಿದ್ದಾರೆಂದು ಶ್ರೀಪಾದ್ ನಾಯ್ಕ್ ಹೇಳಿದರು.

‘‘ಆಯುರ್ವೇದ ವೈದ್ಯರು ತಮ್ಮ ಅಧ್ಯಯನವನ್ನು ಪೂರ್ತಿಗೊಳಿಸಿದ ಬಳಿಕ ಒಂದು ವರ್ಷದ ಇಂಟರ್ನ್‌ಶಿಪ್ ಪಡೆಯುತ್ತಾರೆ. ಅವರು ಸರ್ಜನ್ ಆಗಿ ತರಬೇತಿ ಪಡೆಯುತ್ತಾರೆ ಎಂದು ಶ್ರೀಪಾದ್ ನಾಯ್ಕ್ ತಿಳಿಸಿದರು.

 ಕೆಲವು ನಿರ್ದಿಷ್ಟ ವಿಧದ ಸರ್ಜರಿಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಅವಕಾಶ ನೀಡುವ ಕೇಂದ್ರದ ನಿರ್ಧಾರದ ವಿರುದ್ಧ ಅಲೋಪಥಿ ವೈದ್ಯರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದ್ದರು.

ಆಯುರ್ವೇದ ವೈದ್ಯರುಗಳು ಮೂರು ವರ್ಷಗಲ ಸ್ನಾತಕೋತ್ತರ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಅವರಿಗೆ ಕೆಲವೊಂದು ನಿರ್ದಿಷ್ಟ ಬಗೆಯ ಶಸ್ತ್ರಕ್ರಿಯೆಗಳನ್ನು ನಡೆಸಲು ಅನುಮತಿ ನೀಡುವ ಭಾರತೀಯ ವೈದ್ಯಕೀಯ ಮಂಡಳಿ (ಐಎಂಸಿಆರ್)ಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News