ಯುಪಿಎಸ್‌ಸಿ ಪರೀಕ್ಷೆ: ಕೊನೆಯ ಅವಕಾಶ ಕಳೆದುಕೊಂಡವರಿಗೆ ಹೆಚ್ಚುವರಿ ಅವಕಾಶ ನಿರಾಕರಣೆ

Update: 2021-02-24 17:47 GMT

ಹೊಸದಿಲ್ಲಿ, ಫೆ.24: 2020ರ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಕೊನೆಯ ಅವಕಾಶ ಕಳೆದುಕೊಂಡ ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಳ್ಳಿಹಾಕಿದೆ.

 ಅರ್ಜಿಯನ್ನು ತಳ್ಳಿಹಾಕಲಾಗಿದೆ. ಆದರೆ ಅರ್ಜಿದಾರರ ಪರ ವಾದಿಸಿದ ನ್ಯಾಯವಾದಿ ಅನುಶ್ರೀ ಪ್ರಶಿತ್ ಕಪಾಡಿಯಾ ಅತ್ಯುತ್ತಮವಾಗಿ ವಾದ ಮಂಡಿಸಿದ್ದಾರೆ. ಅವರ ವಾದದಲ್ಲಿ ಸ್ಪಷ್ಟತೆಯಿತ್ತು ಎಂದು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಳ್ಕರ್, ಇಂದು ಮಲ್ಹೋತ್ರ ಮತ್ತು ಅಜಯ್ ರಸ್ತೋಗಿ ಅವರಿದ್ದ ನ್ಯಾಯಪೀಠ ಶ್ಲಾಘಿಸಿದೆ.

ಕೊರೋನ ಸೋಂಕು, ಆ ಬಳಿಕದ ಲಾಕ್‌ಡೌನ್ ಮತ್ತಿತರ ಕಾರಣಗಳಿಂದ ಕೆಲವು ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗೆ ಸೂಕ್ತ ಅಭ್ಯಾಸ ಮತ್ತು ತಯಾರಿ ನಡೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಇದಕ್ಕೆ ಒಪ್ಪಿದ್ದ ಕೇಂದ್ರ ಸರಕಾರ, ಗರಿಷ್ಟ ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಸಿದ್ಧ ಎಂದು ಹೇಳಿತ್ತು. ಆದರೆ ಇದನ್ನು ಒಪ್ಪದ ಅಭ್ಯರ್ಥಿಗಳು, ಗರಿಷ್ಟ ವಯೋಮಿತಿಯಲ್ಲೂ ವಿನಾಯಿತಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಸಂದರ್ಭ ವಾದ ಮಂಡಿಸಿದ ಕೇಂದ್ರ ಸರಕಾರದ ವಕೀಲರು, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದರೆ ಅದು ‘ನಿರಂತರ ಕೋರಿಕೆಯ ಆವೃತ್ತಿ’ಗೆ ನಾಂದಿ ಹಾಡಿದಂತಾಗುತ್ತದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News