ಕೊರೋನ ಸೋಂಕು ಪ್ರಕರಣ ಉಲ್ಬಣ: 10 ರಾಜ್ಯಗಳಿಗೆ ಉನ್ನತ ಮಟ್ಟದ ತಂಡ ರವಾನಿಸಿದ ಕೇಂದ್ರ

Update: 2021-02-24 18:23 GMT

ಹೊಸದಿಲ್ಲಿ, ಫೆ.24: ಕೊರೋನ ಸೋಂಕು ಪ್ರಕರಣದಲ್ಲಿ ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಮೂವರು ಸದಸ್ಯರ ಉನ್ನತ ಮಟ್ಟದ ತಂಡವನ್ನು ಬುಧವಾರ ರವಾನಿಸಿರುವುದಾಗಿ ಕೇಂದ್ರ ಸರಕಾರ ಹೇಳಿದೆ.

ಕೊರೋನ ಸೋಂಕಿನ ಹೊಸ ವೈರಸ್ ಪತ್ತೆಯಾಗಿರುವುದರಿಂದ ಸೋಂಕು ತಡೆಗಟ್ಟಲು ರೂಪಿಸಿರುವ ಶಿಷ್ಟಾಚಾರಗಳ ಉಲ್ಲಂಘನೆ ಮತ್ತು ಕೊರೋನ ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆ ಅಸಡ್ಡೆ ತೋರಬಾರದು ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದೆ. ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯ ನೇತೃತ್ವದ ಮೂವರು ವೃತ್ತಿಪರ ಸದಸ್ಯರ ತಜ್ಞ ತಂಡವನ್ನು ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಜಮ್ಮು-ಕಾಶ್ಮೀರಕ್ಕೆ ರವಾನಿಸಲಾಗಿದೆ ಎಂದು ಇಲಾಖೆ ಹೇಳಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶದ ಆಡಳಿತ ವರ್ಗದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಈ ತಂಡ, ಯಾವ ಕಾರಣದಿಂದ ಕೊರೋನ ಪ್ರಕರಣ ಉಲ್ಬಣಗೊಂಡಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ. ಅಲ್ಲದೆ ಕೊರೋನ ಪ್ರಸರಣ ಸರಪಳಿಯನ್ನು ಮುರಿಯಲು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳೊಂದಿಗೆ ಸಂಘಟಿತ ಕಾರ್ಯ ನಿರ್ವಹಿಸುತ್ತದೆ. ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಜಮ್ಮು-ಕಾಶ್ಮೀರ ರಾಜ್ಯಗಳಿಗೆ ಸೂಚಿಸಲಾಗಿದೆ. ಅಲ್ಲದೆ ಸಂಬಂಧಿತ ಜಿಲ್ಲಾಡಳಿತದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ದೈನಂದಿನ ಸೋಂಕು ಪ್ರಕರಣಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಸೋಂಕಿನ ಲಕ್ಷಣ ಕಂಡುಬಂದರೂ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರಿಗೂ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುವಂತೆ, ಪೊಸಿಟಿವ್ ವರದಿ ಬಂದವರ ಸಂಪರ್ಕ ಪತ್ತೆಹಚ್ಚುವಿಕೆ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ದೇಶದಲ್ಲಿ ಈಗ ಇರುವ ಸಕ್ರಿಯ ಪ್ರಕರಣಗಳ 75% ಪ್ರಕರಣಗಳು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ದಾಖಲಾಗಿದೆ. ಬುಧವಾರ ಬೆಳಿಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 6218 ಹೊಸ ಪ್ರಕರಣ, ಕೇರಳದಲ್ಲಿ 4,034, ತಮಿಳನಾಡು- 449, ಪಂಜಾಬ್-414 ಮತ್ತು ಕರ್ನಾಟಕದಲ್ಲಿ 383 ಪ್ರಕರಣ ದಾಖಲಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 51 ಸಾವಿನ ಪ್ರಕರಣ, ಕೇರಳದಲ್ಲಿ 14 ಸಾವಿನ ಪ್ರಕರಣ, ಪಂಜಾಬ್-10, ತಮಿಳುನಾಡು-6, ಕರ್ನಾಟಕದಲ್ಲಿ 4 ಸಾವಿನ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News