​ಕಾನೂನು ಬಾಹಿರ ಮತಾಂತರ ಮಸೂದೆಗೆ ಉತ್ತರ ಪ್ರದೇಶ ವಿಧಾನಸಭೆ ಅಸ್ತು

Update: 2021-02-25 04:03 GMT
ಫೈಲ್ ಫೋಟೊ (Image Source : PTI)

ಲಕ್ನೋ : ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ವಿಧಾನಸಭೆ, ಕಾನೂನುಬಾಹಿರ ಮತಾಂತರ ನಿಷೇಧ ಮಸೂದೆ-2021ಕ್ಕೆ ಅನುಮೋದನೆ ನೀಡಿದೆ.

ಈ ಮಸೂದೆಯನ್ನು ಇದೀಗ ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಕಳುಹಿಸಲಾಗಿದೆ. ಅಲ್ಲೂ ಅನುಮೋದನೆ ಪಡೆದಲ್ಲಿ ರಾಜ್ಯಪಾಲರ ಅಂಕಿತದ ಬಳಿಕ ಅದು ಕಾಯ್ದೆಯಾಗಲಿದೆ. ಆಡಳಿತಾರೂಢ ಬಿಜೆಪಿ ವಿಧಾನ ಪರಿಷತ್ತಿನಲ್ಲಿ ಬಹುಮತ ಹೊಂದಿಲ್ಲವಾದ್ದರಿಂದ ಮೇಲ್ಮನೆಯಲ್ಲಿ ಒಪ್ಪಿಗೆ ಪಡೆಯುವುದು ಸರ್ಕಾರದ ಪಾಲಿಗೆ ಸವಾಲಿನ ಕೆಲಸವಾಗಿದೆ.

ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಖನ್ನಾ ವಿಧಾನಸಭೆಯಲ್ಲಿ ಮಂಡಿಸಿದ ಮಸೂದೆಗೆ ಸದನ ಧ್ವನಿಮತದ ಒಪ್ಪಿಗೆ ನೀಡಿತು.
ಮಸೂದೆಯನ್ನು ಪರಿಶೀಲನೆಗಾಗಿ ಆಯ್ದ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳ ಮುಖಂಡರು ಆಗ್ರಹಿಸಿದರು. ಬಿಎಸ್ಪಿ ಶಾಸಕಾಂಗ ಪಕ್ಷದ ನಾಯಕ ಲಾಲ್‌ಜಿ ವರ್ಮಾ ಮತ್ತು ಕಾಂಗ್ರೆಸ್ ಸಿಎಲ್‌ಪಿ ನಾಯಕಿ ಆರಾಧನಾ ಮಿಶ್ರಾ ಈ ಆಗ್ರಹ ಮಂಡಿಸಿದರು. ಆದರೆ ಬಲಾತ್ಕಾರ ಅಥವಾ ಒತ್ತಡದಿಂದ ಮಾಡುವ ಮತಾಂತರ ಹೊರತುಪಡಿಸಿ ಇತರ ಬಗೆಯ ಧಾರ್ಮಿಕ ಮತಾಂತರಕ್ಕೆ ಸರ್ಕಾರದ ವಿರೋಧ ಇಲ್ಲ ಎಂದು ಖನ್ನಾ ಪ್ರತಿಪಾದಿಸಿದರು.

ಕಳೆದ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ಈ ಸಂಬಂಧ ಅಧ್ಯಾದೇಶ ಹೊರಡಿಸಿತ್ತು. ಈ ಅಧ್ಯಾದೇಶವನ್ನು ಬಜೆಟ್ ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News