ಅಂತಾರಾಷ್ಟ್ರೀಯ ವೆಬಿನಾರ್ ಗಳಿಗೆ ಪೂರ್ವಾನುಮತಿ ಅಗತ್ಯ ಎಂಬ ನಿಯಮ ವಾಪಸ್ ಪಡೆದ ಕೇಂದ್ರ ಸರಕಾರ

Update: 2021-02-25 05:35 GMT
ಸಾಂದರ್ಭಿಕ ಚಿತ್ರ (Photo: tribuneindia.com)

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಆನ್‍ಲೈನ್ ಸಮ್ಮೇಳನಗಳು ಹಾಗೂ ವಿಚಾರಸಂಕಿರಣಗಳಿಗೆ ಸರಕಾರದಿಂದ ಪೂರ್ವಾನುಮತಿ ಪಡೆಯಬೇಕೆಂಬ ತನ್ನ ನವೆಂಬರ್ 2020ರ ಆದೇಶವನ್ನು ವಿಜ್ಞಾನಿಗಳು ಹಾಗೂ ಶೈಕ್ಷಣಿಕ ತಜ್ಞರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಾಪಸ್ ಪಡೆದಿದೆ.

"ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸ ಹಾಗೂ ಸಭೆ ಸಮಾರಂಭಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸಿದ್ದ ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಲಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳು/ವಿಚಾರಸಂಕಿರಣಗಳು/ತರಬೇತಿ ಇತ್ಯಾದಿಗಳಿಗೆ ಅನುಮತಿ ಪಡೆಯಬೇಕೆಂಬ ನವೆಂಬರ್ 25ರ ನಿಯಮ ಈಗ ಅನ್ವಯವಾಗುವುದಿಲ್ಲ,'' ಎಂದು  ವಿದೇಶಾಂಗ ಸಚಿವಾಲಯದ ಹೊಸ ಆದೇಶ ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕ ಪೂರ್ವದಲ್ಲಿದ್ದ ನಿಯಮಗಳು ಈ ಕಾರ್ಯಕ್ರಮಗಳಿಗೆ ಇನ್ನು ಮುಂದೆ ಅನ್ವಯವಾಗಲಿದೆ. ಈ ಸಮ್ಮೇಳನಗಳು/ವಿಚಾರಸಂಕಿರಣಗಳ ಮುಖ್ಯ ವಿಷಯ ಭಾರತದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದ್ದಲ್ಲ ಎಂಬುದನ್ನೂ ದೃಢಪಡಿಸಿದ ನಂತರವಷ್ಟೇ ಅನುಮತಿ ನೀಡಬೇಕೆಂದು ಕಳೆದ ವರ್ಷದ ಆದೇಶ ತಿಳಿಸಿತ್ತು.

ದೇಶದ 1500ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ಶೈಕ್ಷಣಿಕ ತಜ್ಞರನ್ನು ಪ್ರತಿನಿಧಿಸುವ ದೇಶದ ಎರಡು ಅತ್ಯುನ್ನತ ವೈಜ್ಞಾನಿಕ ಸಂಸ್ಥೆಗಳು ಸರಕಾರದ ನವೆಂಬರ್ ಆದೇಶವನ್ನು ಪ್ರಶ್ನಿಸಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News