ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು: ಇಂಗ್ಲೆಂಡ್ ನ್ಯಾಯಾಲಯ

Update: 2021-02-25 18:14 GMT


ಲಂಡನ್,ಫೆ.25: 14,000 ಕೋ.ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ವಂಚನೆ ಮತ್ತು ಅಕ್ರಮ ಹಣ ವಹಿವಾಟು ಆರೋಪಗಳಲ್ಲಿ ಬೇಕಾಗಿರುವ ವಜ್ರಾಭರಣಗಳ ವ್ಯಾಪಾರಿ ನೀರವ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಇಲ್ಲಿಯ ವೆಸ್ಟ್ ಮಿನ್‌ಸ್ಟರ್ಸ್ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮೋದಿಯ ಮಾನಸಿಕ ಆರೋಗ್ಯ ಹದಗೆಟ್ಟಿದೆ ಮತ್ತು ಭಾರತದಲ್ಲಿಯ ಜೈಲುಗಳಲ್ಲಿ ಸ್ಥಿತಿ ಚೆನ್ನಾಗಿಲ್ಲ ಇತ್ಯಾದಿ ವಾದಗಳನ್ನು ನ್ಯಾಯಾಲಯವು ತಳ್ಳಿಹಾಕಿದೆ. ಭಾರತಕ್ಕೆ ಮೋದಿಯ ಹಸ್ತಾಂತರ ಮಾನವ ಹಕ್ಕುಗಳಿಗೆ ಅನುಗುಣವಾಗಿದೆ ಎಂದು ಹೇಳಿದ ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಝಿ ಅವರು,ತನ್ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಆರೋಪಿಗೆ ಇದೆ ಎಂದು ತಿಳಿಸಿದರು.

ಭಾರತ ಸರಕಾರದ ನಿವೇದನೆಗಳನ್ನು ಪುರಸ್ಕರಿಸಿದ ನ್ಯಾಯಾಧೀಶರು,ಹಸ್ತಾಂತರ ಮಾಡಿದರೆ ಮೋದಿಗೆ ನ್ಯಾಯ ದೊರಕುವುದಿಲ್ಲ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದರು.

ಮೋದಿ ಭಾರತದಲ್ಲಿ ವಿಚಾರಣೆಯನ್ನು ಎದುರಿಸಬೇಕು ಎನ್ನಲು ಬಲವಾದ ಕಾರಣಗಳಿವೆ. ಲೆಟರ್ ಆಫ್ ಅಂಡರ್‌ಟೇಕಿಂಗ್ (ಎಲ್‌ಒಯು) ಅಥವಾ ಹೊಣೆಗಾರಿಕೆ ಮುಚ್ಚಳಿಕೆಗಳ ಮೂಲಕ ಭಾರೀ ಪ್ರಮಾಣದಲ್ಲಿ ಸಾಲಗಳ ಮಂಜೂರಾತಿಯಲ್ಲಿ ಮೋದಿ ಮತ್ತು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರು ಎನ್ನುವುದು ಸ್ಪಷ್ಟವಾಗಿದೆ. ಬಳಿಕ ಮೋದಿ ಸಾಲವನ್ನು ಪಡೆದಿರುವುದನ್ನು ಒಪ್ಪಿಕೊಂಡು ಪಿಎನ್‌ಬಿಗೆ ವೈಯಕ್ತಿಕ ಪತ್ರವನ್ನು ಬರೆದಿದ್ದರು ಮತ್ತು ಅದನ್ನು ಮರುಪಾವತಿಸುವ ಭರವಸೆಯನ್ನು ನೀಡಿದ್ದರು. ಮೋದಿಯ ಸಂಸ್ಥೆಗಳು ನಕಲಿ ಪಾಲುದಾರರಾಗಿದ್ದವು ಎನ್ನುವುದರ ಬಗ್ಗೆ ಸಿಬಿಐ ತನಿಖೆಯನ್ನು ನಡೆಸುತ್ತಿದೆ. ಇವು ಮೋದಿ ನಡೆಸುತ್ತಿದ್ದ ಛಾಯಾ ಕಂಪನಿಗಳಾಗಿದ್ದವು ಎಂದು ಹೇಳಿದ ನ್ಯಾಯಾಧೀಶರು,‘ಮೋದಿ ಕಾನೂನುಬದ್ಧ ವ್ಯವಹಾರ ನಡೆಸುತ್ತಿದ್ದರು ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ಪ್ರಾಮಾಣಿಕ ವ್ಯವಹಾರಗಳು ಕಂಡು ಬಂದಿಲ್ಲ. ನನ್ನ ನಂಬಿಕೆಯಂತೆ ನಡೆದಿರುವುದೆಲ್ಲ ಅಪ್ರಾಮಾಣಿಕ ಪ್ರಕ್ರಿಯೆಯಾಗಿದೆ ’ ಎಂದರು.

 ಎಲ್‌ಒಯುಗಳನ್ನು ಪಡೆದುಕೊಂಡ ವಿಧಾನ ಮತ್ತು ಇತರ ಅಂಶಗಳನ್ನು ಪರಿಗಣಿಸಿದಾಗ ಮೋದಿ ಮತ್ತು ಅವರ ಸಹಚರರು ಮೋಸದಿಂದ ಕಾರ್ಯ ನಿರ್ವಹಿಸುತ್ತಿದ್ದರು ಎನ್ನುವುದು ಸ್ಪಷ್ಟವಾಗಿದೆ ಎಂದ ನ್ಯಾಯಾಧೀಶರು,ಇವುಗಳಲ್ಲಿ ಹಲವು ವಿಷಯಗಳಲ್ಲಿ ಭಾರತದಲ್ಲಿ ವಿಚಾರಣೆ ನಡೆಯಬೇಕಿದೆ. ಮೋದಿ ತಪ್ಪಿತಸ್ಥ ಎಂದು ಘೋಷಿಸಲು ಸಾಕ್ಷಾಧಾರಗಳಿವೆ ಎನ್ನುವುದು ತನಗೆ ತೃಪ್ತಿ ನೀಡಿದೆ. ಅವರ ವಿರುದ್ಧ ಅಕ್ರಮ ಹಣ ಪ್ರಕರಣವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದರು.

ನೈರುತ್ಯ ಲಂಡನ್ನಿನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ಮೋದಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ನ್ಯಾಯಾಲಯದ ತೀರ್ಪನ್ನು ಈಗ ಅಂಕಿತಕ್ಕಾಗಿ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಕಳುಹಿಸಲಾಗುತ್ತದೆ. ಫಲಿತಾಂಶವನ್ನು ಅವಲಂಬಿಸಿ ಉಭಯ ಪಕ್ಷಗಳು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಗಳನ್ನು ಸಲ್ಲಿಸುವ ಅವಕಾಶಗಳಿವೆ.

ಮೋದಿಯನ್ನು ಹಸ್ತಾಂತರ ವಾರಂಟ್‌ನಡಿ 2019,ಮಾ.19ರಂದು ಲಂಡನ್ನಿನಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News