ಮುಖೇಶ್ ಅಂಬಾನಿಯ ಮುಂಬೈ ನಿವಾಸದ ಸಮೀಪ ಸ್ಫೋಟಕವಿದ್ದ ವಾಹನ ಪತ್ತೆ

Update: 2021-02-25 15:43 GMT

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿಯವರ ಮುಂಬೈ ನಿವಾಸದ ಸಮೀಪ ಸ್ಫೋಟಕ ವಸ್ತುವಿದ್ದ ವಾಹನವೊಂದು ಗುರುವಾರ ಪತ್ತೆಯಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆ.

ಭಾರತದ ಅತ್ಯಂತ ಶ‍್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ವಾಸಿಸುವ ಅತ್ಯಂತ ಬಿಗಿ ಭದ್ರತೆ ಇರುವ ನಿವಾಸದ ಕೆಲವೇ ಮೀಟರ್ ದೂರದಲ್ಲಿ ಬಾಂಬ್ ಭೀತಿ ಎದುರಾಗಿದೆ.

ಮುಂಬೈನ ಮುಖೇಶ್ ಅಂಬಾನಿಯ ಮನೆಯಿಂದ ಸ್ವಲ್ಪ ದೂರದಲ್ಲಿ ಕೆಲವು ಜಿಲಟಿನ್ ಹೊಂದಿರುವ ಸ್ಕಾರ್ಪಿಯೊ ವ್ಯಾನ್ ಪತ್ತೆಯಾಗಿದೆ. ಮುಂಬೈ ಅಪರಾಧ ವಿಭಾಗವು ಈ ಕುರಿತು ತನಿಖೆ ಆರಂಭಿಸಿದೆ. ಸತ್ಯವು ಹೊರ ಬರಲಿದೆ ಎಂದು ದೇಶ್ ಮುಖ್ ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಕಾರ್ಮಿ ಕಲ್ ರಸ್ತೆಯಲ್ಲಿ ಗುರುವಾರ ಸಂಜೆ ಅನುಮಾನಾಸ್ಪದ ವಾಹನ ಪತ್ತೆಯಾಗಿದೆ. ತಕ್ಷಣವೇ ಎಚ್ಚತ್ತುಕೊಂಡ ಪೊಲೀಸರು, ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ ಹಾಗೂ ಇತರ ಪೊಲೀಸ್ ತಂಡದೊಂದಿಗೆ ಘಟನಾ ಸ್ಥಳಕ್ಕೆ ತಲುಪಿವೆ.

ವಾಹನವನ್ನು ಪರೀಕ್ಷಿಸಲಾಗಿದ್ದು, ವಾಹನದೊಳಗೆ ಕೆಲವು ಸ್ಫೋಟಕ ವಸ್ತು ಜಿಲೆಟಿನ್ ಪತ್ತೆಯಾಗಿದೆ. ಇದು ಜೋಡಿಸಲಾದ ವಸ್ತುವಾಗಿರಲಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಂಬಾನಿ ಮನೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಬೈ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News