ಗಡಿಯಲ್ಲಿ ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ

Update: 2021-02-25 16:24 GMT

ಹೊಸದಿಲ್ಲಿ, ಫೆ.25: ಫೆಬ್ರವರಿ 24-25ರ ಮಧ್ಯರಾತ್ರಿಯಿಂದ ಜಮ್ಮು-ಕಾಶ್ಮೀರ ಹಾಗೂ ಇತರ ಪ್ರದೇಶಗಳಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡು ಹಾರಾಟವನ್ನು ಸಮಾಪ್ತಿಗೊಳಿಸಲು ನಿರ್ಧರಿಸಿರುವುದಾಗಿ ಭಾರತ ಮತ್ತು ಪಾಕಿಸ್ತಾನದ ಸೇನಾಧಿಕಾರಿಗಳು ಘೋಷಿಸಿದ್ದಾರೆ.

ಉಭಯ ದೇಶಗಳ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ ಜಂಟಿ ಹೇಳಿಕೆಯನ್ನು ಭಾರತದ ಸೇನಾಪಡೆ ಗುರುವಾರ ಬಿಡುಗಡೆಗೊಳಿಸಿದೆ. ಉಭಯ ದೇಶಗಳ ಸೇನಾಪಡೆಯ ಅಧಿಕಾರಿಗಳ ಮಧ್ಯೆ ಮುಕ್ತ, ಸೌಹಾರ್ದಯುತ ರೀತಿಯಲ್ಲಿ ಸಭೆ ನಡೆದಿದೆ. ಟೆಲಿಫೋನ್ ಹಾಟ್‌ಲೈನ್‌ನಲ್ಲಿ ನಿರಂತರ ಸಂಪರ್ಕ ಮುಂದುವರಿಸಲು, ತಪ್ಪು ತಿಳುವಳಿಕೆಯಿಂದ ಉದ್ಭವಿಸುವ ಪರಿಸ್ಥಿತಿ ಅಥವಾ ಅನಿರೀಕ್ಷಿತ ಬಿಕ್ಕಟ್ಟನ್ನು ಪರಿಹರಿಸಲು ಎರಡೂ ಸೇನೆಗಳ ಮಧ್ಯೆ ಧ್ವಜಸಭೆ (ಫ್ಲಾಗ್ ಮೀಟಿಂಗ್) ನಡೆಸಲು ನಿರ್ಧರಿಸಲಾಗಿದೆ.

ಉಭಯ ದೇಶಗಳ ಹಿತಾಸಕ್ತಿಗೆ ಪೂರಕವಾಗಿ ಗಡಿಯುದ್ದಕ್ಕೂ ಪರಸ್ಪರ ಲಾಭದಾಯಕ ಮತ್ತು ಸುಸ್ಥಿರ ಶಾಂತಿಯನ್ನು ಸಾಧಿಸಲು ಮತ್ತು ಶಾಂತಿಯನ್ನು ಕದಡಿ ಹಿಂಸಾಚಾರಕ್ಕೆ ಪ್ರೇರಣೆ ನೀಡುವ ಪ್ರಮುಖ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಸೇನಾಧಿಕಾರಿಗಳು ಒಪ್ಪಿದ್ದಾರೆ. 2021ರ ಫೆಬ್ರವರಿ 24-25ರ ಮಧ್ಯರಾತ್ರಿಯಿಂದ ಅನ್ವಯಿಸುವಂತೆ ಕದನ ವಿರಾಮ ಜಾರಿಗೆ ಬರಲಿದ್ದು ಈ ನಿಟ್ಟಿನಲ್ಲಿ ಒಪ್ಪಲಾಗಿರುವ ಎಲ್ಲಾ ಒಡಂಬಡಿಕೆ, ತಿಳುವಳಿಕೆಗಳು ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ಎರಡೂ ಪಡೆಯ ಅಧಿಕಾರಿಗಳು ನಿಕಟ ನಿಗಾ ವಹಿಸಲಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News