ಮೀನುಗಾರರ ಸಮುದಾಯಕ್ಕೆ ಕೇವಲ ಇಲಾಖೆ ಅಲ್ಲ, ಪ್ರತ್ಯೇಕ ಸಚಿವಾಲಯದ ಅಗತ್ಯ ಇದೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಫೆ. 25: ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಕುರಿತು ನೀಡಿರುವ ವ್ಯಂಗ್ಯಭರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೀನುಗಾರರ ಸಮುದಾಯಕ್ಕೆ ಸಚಿವಾಲಯದಲ್ಲಿ ಕೇವಲ ಇಲಾಖೆ ಅಲ್ಲ, ಬದಲಾಗಿ ಸ್ವತಂತ್ರ ಮೀನುಗಾರಿಕೆ ಸಚಿವಾಲಯದ ಅಗತ್ಯ ಇದೆ ಗುರುವಾರ ಹೇಳಿದ್ದಾರೆ.
ಮೀನುಗಾರಿಕೆಗೆ ಸ್ವತಂತ್ರ ಸಚಿವಾಲಯ ಇಲ್ಲ ಎಂದು ಕಳೆದ ವಾರ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪುದುಚೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಘಾತ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಹೇಳಿಕೆ ನೀಡಿದ ಬಳಿಕ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ ನಾಯಕರು ಅವರ ಬಗ್ಗೆ ವ್ಯಂಗ್ಯವಾಡಿದ್ದರು. ಪ್ರಧಾನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘‘ಆತ್ಮೀಯ ಪ್ರಧಾನಿ ಅವರೇ, ಮೀನುಗಾರ ಸಮುದಾಯಕ್ಕೆ ಸಚಿವಾಲಯದಲ್ಲಿ ಕೇವಲ ಒಂದು ಇಲಾಖೆ ಇದ್ದರೆ ಸಾಲದು. ಸ್ವತಂತ್ರ ಮೀನುಗಾರಿಕೆ ಸಚಿವಾಲಯದ ಅಗತ್ಯ ಇದೆ’’ ಎಂದಿದ್ದಾರೆ.
► ನನಗೆ ಆಘಾತವಾಯಿತು: ಪ್ರಧಾನಿ ನರೇಂದ್ರ ಮೋದಿ
ಮೀನುಗಾರಿಕಾ ಸಚಿವಾಲಯವನ್ನು ಆರಂಭಿಸುವ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಫೆಬ್ರವರಿ 17ರಂದು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಆರಂಭಿಸಲು ಬಯಸುವುದಾಗಿ ಹೇಳಿಕೆ ನೀಡಿದ್ದರು. ಅನಂತರ ಗಿರಿರಾಜ್ ಸಿಂಗ್ ಹಾಗೂ ಕಿರಣ್ ರಿಜೆಜು ಸೇರಿದಂತೆ ಹಲವು ಕೇಂದ್ರ ಸಚಿವರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯ ಈಗಾಗಲೇ ಅಸ್ತಿತ್ವದಲ್ಲಿ ಇದೆ ಎಂದು ಪ್ರತಿಪಾದಿಸಿದ್ದರು.
ದೇಶದ ಮೀನುಗಾರ ಸಮುದಾಯಕ್ಕಾಗಿ ಕೇಂದ್ರ ಸಚಿವಾಲಯವನ್ನು ಆರಂಭಿಸುವುದಾಗಿ ರಾಹುಲ್ ಗಾಂಧಿ ಬುಧವಾರ ಹೇಳಿದ್ದರು. ಕೊಲ್ಲಂ ನಗರದ ತಂಗಶ್ಶೇರಿ ಪ್ರದೇಶದಲ್ಲಿ ಮೀನುಗಾರ ಸಮುದಾಯದೊಂದಿಗಿನ ಸಭೆಯಲ್ಲಿ ಅವರು ಈ ಭರವಸೆ ನೀಡಿದ್ದರು. ‘‘ಮೀನುಗಾರಿಕೆ ಸಚಿವಾಲಯ ಇಲ್ಲ. ಆದುದರಿಂದ ಮೀನುಗಾರಿಕೆ ಸಚಿವಾಲಯ ಸ್ಥಾಪಿಸಲು ಬಯಸುವುದಾಗಿ ರಾಹುಲ್ ಗಾಂಧಿ ಅವರು ಹೇಳಿರುವುದು ಕೇಳಿ ನನಗೆ ನಿಜವಾಗಿಯೂ ಆಘಾತವಾಯಿತು’’ ಎಂದು ಪುದುಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ‘‘ಸತ್ಯವೇನೆಂದರೆ, ಈ ಸಚಿವಾಲಯ ಈಗಾಗಲೇ ಅಸ್ತಿತ್ವದಲ್ಲಿ ಇದೆ. ಪ್ರಸಕ್ತ ಇರುವ ಎನ್‌ಡಿಎ ಸರಕಾರ 2019ರಲ್ಲೇ ಈ ಸಚಿವಾಲಯವನ್ನು ಆರಂಭಿಸಿದೆ’’ ಎಂದು ಅವರು ಹೇಳಿದ್ದಾರೆ. ಬಿಜೆಪಿ ರ್ಯಾಲಿಯಲ್ಲಿ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಆಡಳಿತ ಭಾರತದಲ್ಲಿ ಬ್ರಿಟಿಷ್ ಆಡಳಿತ ಇದ್ದಂತೆ ಎಂದು ಹೇಳಿದರು.
‘‘ವಸಾಹತುಶಾಹಿಯದ್ದು ಒಡೆದು ಆಳುವ ನೀತಿ. ಕಾಂಗ್ರೆಸ್‌ನದ್ದು ಒಡೆಯುವ, ಸುಳ್ಳು ಹೇಳುವ ಹಾಗೂ ಆ ಮೂಲಕ ಆಡಳಿತ ನಡೆಸುವ ನೀತಿ. ಕೆಲವು ಸಂದರ್ಭ ಕಾಂಗ್ರೆಸ್ ನಾಯಕರು ಪ್ರದೇಶದ ವಿರುದ್ಧ ಪ್ರದೇಶವನ್ನು ಸಮುದಾಯದ ವಿರುದ್ಧ ಸಮುದಾಯವನ್ನು ನಿಲ್ಲಿಸುತ್ತಾರೆ’’ ಎಂದರು.