ಸಿವಿಲ್ ನ್ಯಾಯಾಧೀಶರಾದ ಧರ್ಮಸ್ಥಳದ ಚೇತನಾ

Update: 2021-02-26 05:36 GMT

ಮಂಗಳೂರು, ಫೆ.26: ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಾಲಿನ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಧರ್ಮಸ್ಥಳದ ನಾರ್ಯ ನಿವಾಸಿ ಚೇತನಾ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಫೆ.25ರಂದು ಅಧಿಸೂಚನೆ ಹೊರಡಿಸಲಾಗಿದೆ.

 29ರ ಹರೆಯದ ಚೇತನಾ ಧರ್ಮಸ್ಥಳ ಗ್ರಾಮದ ನಾರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ನಾಲ್ವರು ಮಕ್ಕಳ ಪೈಕಿ ಎರಡನೆಯವರು. ತಮ್ಮ 1-6 ತರಗತಿ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸಮೀಪದ ಸರಕಾರಿ ಪೆರ್ನೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಗಿಸಿದ ಅವರು ಏಳನೇ ತರಗತಿ ಶಿಕ್ಷಣವನ್ನು ಕನ್ಯಾಡಿ ಸರಕಾರಿ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಡಶಾಲಾ ಶಿಕ್ಷಣವನ್ನು ಧರ್ಮಸ್ಥಳದ ಶ್ರೀ ಧರ್ಮಸ್ಥಳ. ಮಂಜುನಾಥೇಶ್ವರ ಸೆಕೆಂಡರಿ ಶಾಲೆಯಲ್ಲಿ ಪಡೆದರೆ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದರು. ಬಳಿಕ ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ 2016ನೇ ಇಸವಿಯಲ್ಲಿ ಕಾನೂನು ಪದವೀಧರೆಯಾದರು.

ಕಾನೂನು ವಿದ್ಯಾಭ್ಯಾಸದ ನಂತರ ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲ್ ರ ಕಚೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿದರು. ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ರವರ ಲಾ ಕ್ಲಾರ್ಕ್ ರೀಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕೆಳೆದ ಒಂದು ವರ್ಷದಿಂದ  ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News