ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ಆಚಾರ್ಯ ನಿಧನ

Update: 2021-02-26 06:24 GMT

ಉಡುಪಿ, ಫೆ.26: ಉದ್ಯಾವರ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ರಾತ್ರಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಡಾ.ಶ್ರೀನಿವಾಸ ಆಚಾರ್ಯರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕರುಳು ಸಂಬಂಧಿ ಸಮಸ್ಯೆಯಿಂದ ನರಳುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.ಆಚಾರ್ಯರ ತಂದೆ ಡಾ.ಗುರುರಾಜ ಆಚಾರ್ಯರು ಸಹ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಡಾ.ಆಚಾರ್ಯರು ಮೂರು ದಶಕಗಳಿಗೂ ಅಧಿಕ ಕಾಲ ತಜ್ಞ ಆಯುರ್ವೇದ ವೈದ್ಯರಾಗಿ ಅನುಭವವನ್ನು ಹೊಂದಿದ್ದರು. ಕಾಯಚಿಕಿತ್ಸೆಯಲ್ಲಿ ಅವರು ಪರಿಣಿತರಾಗಿದ್ದರೂ, ಆಯುರ್ವೇದದ ಎಲ್ಲಾ ವಿಭಾಗಗಳಲ್ಲೂ ಅವರು ಜ್ಞಾನವನ್ನು ಹೊಂದಿದ್ದರು. ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಅವರು ಮೂರು ದಶಕಗಳಿಗೂ ಅಧಿಕ ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಬಳಿಕ ಎರಡು ವರ್ಷಗಳ ಹಿಂದೆ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ದಕ್ಷ ಆಡಳಿತಗಾರನಾಗಿಯೂ ಅವರು ಹೆಸರಾಗಿದ್ದರು.

ಉಡುಪಿ ಆಯುರ್ವೇದ (ಈಗಿನ ಎಸ್‌ಡಿಎಂ) ಕಾಲೇಜಿನಿಂದ ಬಿಎಎಂಎಸ್ ಆಯುರ್ವೇದ ಪದವಿ ಪಡೆದಿದ್ದ ಇವರು, ಜಾಮನಗರದ ಗುಜರಾತ್ ಆಯುರ್ವೇದ ವಿವಿಯಿಂದ ಸ್ನಾತಕೋತ್ತರ ಎಂಡಿ (ಆಯುರ್ವೇದ) ಪದವಿಯನ್ನು ಪಡೆದಿದ್ದರು. ಎರಡರಲ್ಲೂ ಅವರು ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News