ಪ್ರೊ. ಅಮೃತ ಸೋಮೇಶ್ವರರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ

Update: 2021-02-26 17:00 GMT

ಮಂಗಳೂರು, ಫೆ.26: ಹಿರಿಯ ವಿದ್ವಾಂಸ, ಸಾಹಿತಿ, ಕವಿ ಪ್ರೊ.ಅಮೃತ ಸೋಮೇಶ್ವರ ಅವರು 2020ನೆ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಮೃತ ಸೋಮೇಶ್ವರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.

 86 ವರ್ಷ ಪ್ರಾಯದ ಅಮೃತ ಸೋಮೇಶ್ವರ ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರು. ಕನ್ನಡ, ತುಳು ಭಾಷೆಯ ಸಾಹಿತಿಯಾಗಿ, ಸಂಶೋಧಕ ರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಮಾಜಮುಖಿಯಾಗಿ ಜನಸಾಮಾನ್ಯರಿಗೆ ಚಿರಪರಿಚಿತರು.

ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕ ಎಂಬಲ್ಲಿ ಜನಿಸಿದ್ದ ಅವರು ತನ್ನ ಬಾಲ್ಯವನ್ನು ಮುಂಬೈಯಲ್ಲಿ ಕಳೆದಿದ್ದರು. ಐದು ವರ್ಷ ಪ್ರಾಯವಾಗುವಾಗ ಊರಿಗೆ ಮರಳಿ, ಕೋಟೆಕಾರಿನಲ್ಲಿರುವ ಸ್ಟೆಲ್ಲಾ ಮೇರಿಸ್ ಹಿ.ಪ್ರಾ. ಶಾಲೆಗೆ ಸೇರಿದರು. ಅಲ್ಲಿ 5ನೇ ತರಗತಿವರೆಗೆ ಕಲಿತು 1946ರಲ್ಲಿ ಆನಂದಾಶ್ರಮ ಪ್ರೌಢಶಾಲೆಗೆ ಸೇರಿ ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದರು.

ಪ್ರೌಢಶಾಲಾ ವ್ಯಾಸಂಗದ ಅವಧಿಯಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಅಮೃತರು ಕವನ ಬರೆಯತೊಡಗಿದರು. 9ನೇ ತರಗತಿಯಲ್ಲಿರುವಾಗ ಅವರು ‘ಶ್ರೀಮತಿ ಪರಿಣಯ’ ಎಂಬ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದರು, ಕಥೆ, ಕವನ, ಪ್ರಬಂಧ, ನಾಟಕ ಮತ್ತು ಯಕ್ಷಗಾನ ಪ್ರಸಂಗವನ್ನೊಳಗೊಂಡ ಪಂಚಾಮೃತ ಎಂಬ ಕೈ ಬರಹದ ಒಂದು ಪುಸ್ತಕವನ್ನು ಕೂಡಾ ಅವರು ಆ ದಿನಗಳಲ್ಲಿ ಬರೆದಿದ್ದರು.

ಎಸೆಸೆಲ್ಸಿಯಲ್ಲಿರುವಾಗಲೇ ಅವರು ಬರೆದ ‘ತನಿಯ ಗುರುವರ ಕಾಳಗ’ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವೂ ಶಾಲೆಯಲ್ಲಿ ನಡೆದಿತ್ತು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದ ಅವರು ಬಳಿಕ ಅದೇ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. 1959ರಲ್ಲಿ ಅವರ ಪ್ರಥಮ ಕವನ ಸಂಕಲನ ‘ವನಮಾಲೆ ’ ಪ್ರಕಟವಾಯಿತು. 1961ರಲ್ಲಿ ಅವರು ಪ್ರಕಟಿಸಿದ ತುಳು ಪಾಡ್ದನದ ಕಥೆಗಳು ಕೃತಿಗೆ ಕೇಂದ್ರ ಸರಕಾರದ ವಿದ್ಯಾ ಇಲಾಖೆಯಿಂದ ಪ್ರಶಸ್ತಿಯೂ ಬಂತು.

1965ರಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಸೇರ್ಪಡೆಯಾದರು. ಅಲ್ಲಿ ಎರಡು ವರ್ಷ ಕಾಲ ಉದ್ಯೋಗ ಮಾಡುತ್ತಲೇ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ 26 ವರ್ಷಗಳ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾದರು.

ವೃತ್ತಿಯ ಮಧ್ಯೆ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ನಿವೃತ್ತಿಯ ಬಳಿಕವೂ ಸಾಹಿತ್ಯ ರಚನೆ, ಜಾನಪದ ಅಧ್ಯಯನ, ತುಳು ಸಂಸ್ಕೃತಿ ಸಂಶೋಧನೆ ಮುಂತಾದ ಕೆಲಸಗಳಲ್ಲಿ ನಿರತರಾದರು.ವಿಸ್ತಾರವಾದ ಓದು-ಚಿಂತನೆಗಳ ಮೂಲಕ ತಾನು ಕಂಡುಕೊಂಡ ವಿಚಾರ ಗಳನ್ನು ದಾಖಲಿಸಿ ಅವುಗಳನ್ನು ಗ್ರಂಥರೂಪದಲ್ಲಿ ಪ್ರಕಟಿಸುತ್ತಾ ಹೋದರು. ಈ ಮಧ್ಯೆ ಅವರು ಯಕ್ಷಗಾನ ಕಲೆಯ ಬಗ್ಗೆ ಸಂಶೋಧನೆ ಹಾಗೂ ಪ್ರಸಂಗರಚನೆಯ ಕೆಲಸಗಳನ್ನು ಮಾಡತೊಡಗಿದರು.

ನಿವೃತ್ತಿ ಬಳಿಕ ಕೆಲವು ಕಾಲ ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಯಕ್ಷಗಾನ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದರು, ಮಂಗಳೂರು ವಿವಿಯ ಅಕಾಡಮಿಕ್ ಕೌನ್ಸಿಲ್‌ನ ಸದಸ್ಯತನವೂ ಅವರಿಗೆ ಲಭಿಸಿತ್ತು. ಹಂಪಿಯ ಕನ್ನಡ ವಿವಿಯ ಸೆನೆಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. 2006ರಲ್ಲಿ ಮಂಗಳೂರು ವಿವಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತ್ತು.

ಈಗಾಗಲೆ ಅಮೃತ ಸೋಮೇಶ್ವರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ, ತುಳು ಅಕಾಡಮಿಯ ಪ್ರಶಸ್ತಿ, ಹಲಸಂಗಿ ಗೆಳೆಯರ ಬಳಗದ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕುಶಿ ಹರಿದಾಸ ಭಟ್ಟ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ ಹೀಗೆ 40ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.

ಪ್ರಪ್ರಥಮ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪ್ರಪ್ರಥಮ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷತೆ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಮುಂಬೈ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಅನೇಕ ಗೌರವಕ್ಕೆ ಅಮೃತರು ಪಾತ್ರರಾಗಿದ್ದರು. ಇದೀಗ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನನಗೀಗ 86ರ ಹರೆಯ.ಈ ಪ್ರಶಸ್ತಿಯು ತಡವಾಗಿ ಬಂದಿದೆ ಎಂದು ನನಗೆ ಅನಿಸಲೇ ಇಲ್ಲ. ಯಾಕೆಂದರೆ ನಾನು ಯಾವ ಪ್ರಶಸ್ತಿಯನ್ನೂ ನಿರೀಕ್ಷೆ ಮಾಡಿ ದವನಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿಯು ಗೌರವಯುತವಾಗಿ ನೀಡಿದ ಈ ಪ್ರಶಸ್ತಿಯನ್ನು ಅತ್ಯಂತ ವಿನೀತಭಾವದಿಂದ ಸ್ವೀಕರಿಸುವೆ. ವಯಸ್ಸು ಎಂದೂ ನನ್ನ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ. ಅತ್ತಿಂದಿತ್ತ ನಡೆಯಲು ಕಷ್ಟವಾಗುತ್ತಿದೆ. ಆದರೂ ಓದುತ್ತಿರುವೆ. ಬರೆಯುತ್ತಿರುವೆ. ಈಗಾಗಲೆ ಬರೆದ ಲೇಖನಗಳ ಸಂಕಲನವೊಂದನ್ನು ಪ್ರಕಟಿಸಬೇಕೆಂದಿರುವೆ. ಅದರ ಸಿದ್ಧತೆಯಲ್ಲಿರುವೆ. ಅಕಾಡಮಿಯ ಗೌರವ ಪ್ರಶಸ್ತಿ ಬಂದಿರುವುದರಿಂದ ಖುಷಿಯಾಗಿದೆ.

- ಪ್ರೊ. ಅಮೃತ ಸೋಮೇಶ್ವರ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News