ಲೈಂಗಿಕ ಕಿರುಕುಳ ವಿರೋಧಿಸಿದ ಮಹಿಳೆಯ ಹತ್ಯೆ; ಆರೋಪ

Update: 2021-02-26 17:56 GMT

ರಾಯಪುರ, ಫೆ. 26: ಲೈಂಗಿಕ ಕಿರುಕುಳ ವಿರೋದಿಸಿರುವುದಕ್ಕೆ 42 ವರ್ಷದ ಮಹಿಳೆಯೋರ್ವರನ್ನು ಥಳಿಸಿ ಹತ್ಯೆಗೈದಿದ್ದಾರೆನ್ನಲಾದ ಘಟನೆ ಚತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು 20 ವರ್ಷದ ಚಿಂತಾಮಣಿ ಪಟೇಲ್ ಆಲಿಯಾಸ್ ಚಿಂತು ಎಂದು ಗುರುತಿಸಲಾಗಿದೆ. ಈತ ಮಹಿಳೆಯ ಪುತ್ರನ ಗೆಳೆಯ. ಚಿಂತುವನ್ನು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಬಾನ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಬುಧವಾರ ಈ ಅಮಾನವೀಯ ಘಟನೆ ನಡೆದಿದೆ.

‘‘ಮಹಿಳೆಯ ಪುತ್ರನ ಗೆಳೆಯನಾಗಿರುವ ಚಿಂತು ಇದೇ ಗ್ರಾಮದ ನಿವಾಸಿ. ಹೊಲದಲ್ಲಿ ನಿಲ್ಲಿಸಿದ್ದ ತನ್ನ ಕೊಯ್ಲು ಯಂತ್ರವನ್ನು ಗೆಳೆಯನನ್ನು ಕರೆದೊಯ್ದು ತೋರಿಸಲು ಚಿಂತು ಬುಧವಾರ ರಾತ್ರಿ ಗೆಳೆಯನ ಮನೆಗೆ ಆಗಮಿಸಿದ್ದ. ಈ ಸಂದರ್ಭ ಮಹಿಳೆ ಪುತ್ರ ಮನೆಯಲ್ಲಿ ಇಲ್ಲ ಎಂದು ಹೇಳಿದ್ದರು. ತಡವಾಗಿರುವುದರಿಂದ ಹಾಗೂ ಒಬ್ಬಂಟಿಯಾಗಿ ತೆರಳುತ್ತಿರುವುದರಿಂದ ಚಿಂತುವಿನೊಂದಿಗೆ ಮಹಿಳೆ ಕೂಡ ತೆರಳಿದ್ದರು. ಹೊಲದಿಂದ ಹಿಂದಿರುಗುವಾಗ ಚಿಂತು ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಪಯತ್ನಿಸಿದ್ದ. ಇದನ್ನು ಮಹಿಳೆ ವಿರೋಧಿಸಿದ್ದರು’’ ಎಂದು ಬಾನ್ಸಾ ಪೊಲೀಸ್ ಠಾಣೆ ಅಧಿಕಾರಿ ಬಸ್ನಾ ಲೇಕ್‌ರಾಮ್ ಠಾಕೂರ್ ತಿಳಿಸಿದ್ದಾರೆ.

ಈ ಸಂದರ್ಭ ಚಿಂತು ಮಹಿಳೆಗೆ ಕಲ್ಲಿನಿಂದ ತಲೆಗೆ ಹೊಡೆದು ಪರಾರಿಯಾಗಿದ್ದ. ಗಂಭೀರ ಗಾಯಗೊಂಡು ಮಹಿಳೆಯ ಬೊಬ್ಬೆ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದರು. ಮಹಿಳೆ ನಡೆದಿರುವುದನ್ನು ಗ್ರಾಮಸ್ಥರಿಗೆ ತಿಳಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮಹಿಳೆಯ ಹೇಳಿಕೆಯ ಆಧಾರದಲ್ಲಿ ಆರೋಪಿ ಚಿಂತುವನ್ನು ಗುರುವಾರ ಬಂಧಿಸಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News