ಭಾರತ್ ಬಂದ್: ಮಿಶ್ರ ಪ್ರತಿಕ್ರಿಯೆ

Update: 2021-02-26 18:01 GMT

ಹೊಸದಿಲ್ಲಿ, ಫೆ. 26: ತೈಲ ಬೆಲೆ, ಜಿಎಸ್‌ಟಿ ಏರಿಕೆ ಖಂಡಿಸಿ ಹಾಗೂ ಜಿಎಸ್‌ಟಿಯ ಮರು ಪರಿಶೀಲನೆಗೆ ಆಗ್ರಹಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಶುಕ್ರವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಸಂದರ್ಭ ಹೊಸದಿಲ್ಲಿಯಲ್ಲಿ ಹಲವು ಮಾರುಕಟ್ಟೆಗಳು ತೆರೆದಿದ್ದವು. ಇನ್ನೊಂದು ದಿನ ನಷ್ಟಕ್ಕೆ ಒಳಗಾಗಲು ಬಯಸದೇ ಇರುವುದರಿಂದ ಬಂದ್‌ಗೆ ಬೆಂಬಲದ ಹೊರತಾಗಿಯು ಸಂಸ್ಥೆಗಳನ್ನು ಮುಚ್ಚಿಲ್ಲ ಎಂದು ಹಲವು ವ್ಯಾಪಾರಿಗಳು ಹೇಳಿದ್ದಾರೆ. ಸಿಎಐಟಿ ತನ್ನ ಹೇಳಿಕೆಯಲ್ಲಿ, ದೇಶಾದ್ಯಂತ 40 ಸಾವಿರ ವ್ಯಾಪಾರಿಗಳ ಸಂಘಟನೆಗಳಿಗೆ ಸೇರಿದ 8 ಕೋಟಿಗೂ ಅಧಿಕ ಉದ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿದ್ದುದರಿಂದ ಹಾಗೂ ವಾಣಿಜ್ಯ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ವ್ಯಾಪಾರ ಚಟುವಟಿಕೆಗಳು ನಡೆಯದೇ ಇರುವುದರಿಂದ ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ಸಿಎಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘‘ದಿಲ್ಲಿಯ ಹೆಚ್ಚಿನ ಮಾರುಕಟ್ಟೆಗಳು ತೆರೆದಿದ್ದವು. ಆದರೆ, ಸಂಘಟನೆ ಭಾರತ್ ಬಂದ್‌ಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ. ಸುಮಾರು ಶೇ. 98 ಮಾರುಕಟ್ಟೆ, ಹೊಟೇಲ್, ಕೈಗಾರಿಕಾ ಪ್ರದೇಶ ಮುಚ್ಚಿದ್ದವು. ಚೌರಿ ಬಝಾರ್ ಹಾಗೂ ಕರೋಲ್ ಬಾಗ್‌ನ ಕೆಲವು ಭಾಗಗಳಲ್ಲಿ ಮಾತ್ರ ವ್ಯವಹಾರ ಮುಂದುವರಿದಿತ್ತು. ಆದರೆ, ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಕಾಶ್ಮೀರಿ ಗೇಟ್‌ನಲ್ಲಿ ಅಪರಾಹ್ನ 12.30ಕ್ಕೆ ಪ್ರತಿಭಟನೆ ನಡೆಸಿದ್ದೇವೆ’’ ಎಂದು ಚೇಂಬರ್ಸ್‌ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಬ್ರಿಜೆಜ್ ಗೋಯಲ್ ಹೇಳಿದ್ದಾರೆ.

‘‘ಈ ಬಾರಿ ಮಾರುಕಟ್ಟೆ ಬಂದ್ ಮಾಡುವುದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ. ವ್ಯಾಪಾರಿಗಳು ಈಗಾಗಲೆ ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದಾರೆ. ನಾವು ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಅಲ್ಲದೆ ಈ ಬೇಡಿಕೆ ಸರಿಯಾದುದು ಎಂಬುದು ನಮ್ಮ ಭಾವನೆ’’ ಎಂದು ಹೊಸದಿಲ್ಲಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಅತುಲ್ ಭಾರ್ಗವ್ ಅವರು ಹೇಳಿದ್ದಾರೆ. ಒಡಿಶಾದಲ್ಲಿ ವ್ಯಾಪಾರಿಗಳು ಅಂಗಡಿ, ವಾಣಿಜ್ಯ ಸಂಸ್ಥೆಗಳ ಬಾಗಿಲು ಮುಚಿದ್ದರು. ವಾಣಿಜ್ಯ ವಾಹನಗಳು ರಸ್ತೆಗಿಳಿಯಿಲಿಲ್ಲ. ರಾಜ್ಯದಲ್ಲಿ ಸುಮಾರು 20 ಲಕ್ಷ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳು ಮುಚಿದ್ದವು. ಭುವನೇಶ್ವರ, ಕತಕ್, ರೂರ್ಕೆಲಾ, ಸಾಂಬಾಲ್ಪುರ, ಬಾಲಸೋರೆ ಹಾಗೂ ಬೆಹ್ರಾಮ್‌ಪುರದ ವಿವಿಧ ಭಾಗಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿತ್ತು. ಇನ್ನೊಂದೆಡೆ ಮಧ್ಯಪ್ರದೇಶದ ವ್ಯವಹಾರ ರಾಜಧಾನಿಯಾದ ಇಂದೋರ್‌ನಲ್ಲಿ ಯಾವುದೇ ಅಂಗಡಿ-ಮುಂಗಟ್ಟುಗಳು ಮುಚ್ಚಲಿಲ್ಲ. ಲಾಕ್‌ಡೌನ್‌ನಿಂದ ಈಗಾಗಲೇ ನಷ್ಟ ಅನುಭವಿಸಿರುವುದರಿಂದ ಬಂದ್ ಸಾಧ್ಯವಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಜಿಎಸ್‌ಟಿ ವೈಪರಿತ್ಯದ ಬಗ್ಗೆ ನಾವು ಈಗಾಗಲೇ ವಿರೋಧ ದಾಖಲಿಸಿದ್ದೇವೆ. ಆದರೆ, ಈ ವಿಷಯದ ಕುರಿತಂತೆ ಬಂದ್‌ಗೆ ನಮಗೆ ಬೆಂಬಲ ವ್ಯಕ್ತವಾಗಿಲ್ಲ ಎಂದು ಅಹಿಲ್ಯಾ ಚೇಂಬರ್ಸ್‌ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ರಮೇಶ್ ಖಂಡೇವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News