ಮಂಗಳೂರು : ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೊರಿಯಲ್ ಆಡಿಟೋರಿಯಂ, ಈಜುಕೊಳ ಉದ್ಘಾಟನೆ

Update: 2021-02-27 11:13 GMT

ಮಂಗಳೂರು, ಫೆ. 27: ಶಕ್ತಿ ನಗರದ ಶಕ್ತಿ ವಿದ್ಯಾ ಸಂಸ್ಥೆ ಯಲ್ಲಿ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಸರೋಶ್ ಮೆಮೋರಿಯಲ್ ಈಜುಕೊಳದ ಉದ್ಘಾಟನೆಯನ್ನು ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರು ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್ ಎಲ್ಲಾ ಕ್ಷೇತ್ರಕ್ಕೂ ಹೊಡೆತ ನೀಡಿರುವಂತೆ ಶಿಕ್ಷಣಕ್ಕೂ ದೂರಕಾಮಿ ಪರಿಣಾಮವನ್ನು ಬೀರಿದೆ. ಶಾಲೆಗಳನ್ನು ಯಾವಾಗ ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕೆಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳು ಅನೇಕ ಸವಾಲುಗಳನ್ನು ಎದುರಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕಡಿತ ಆಗದಂತೆ ಉತ್ತಮ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದರಲ್ಲದೆ ಶಕ್ತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಸಮಾಜಕ್ಕೆ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುವ ಜತೆಗೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಮಕ್ಕಳು ಕೂಡಾ ಅಂತ:ಕರಣದೊಂದಿಗೆ ಸಮಾಜದ ಬಗ್ಗೆ ತುಡಿತವಿರುವಂತಹ ಕೆಲಸ ಮಾಡಬೇಕು ಎಂದು ಶಿಕ್ಷಣ ಸಚಿವರು ಕಿವಿಮಾತು ಹೇಳಿದರು.

ಐಪಿಎಸ್ ನಿವೃತ್ತ ಅಧಿಕಾರಿಯೂ ಆಗಿರುವ ಗೋಪಾಲ ಹೊಸೂರು ಮಾತನಾಡಿ, ಇಲ್ಲಿನ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳಲ್ಲಿಯೂ ಅಚ್ಚುಕಟ್ಟು, ಸ್ವಚ್ಛತೆ ಶ್ಲಾಘನೀಯ ಎಂದರು.

ಗ್ರಾಮಾಂತರ ಈಜುಗಾರರಿಗೆ ತರಬೇತಿ ನೀಡಿದ್ದಲ್ಲಿ ಉತ್ತಮ ಈಜುಪಟುಗಳಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಲಿದ್ದು, ಅದಕ್ಕೆ ಪೂರಕವಾದ ವ್ಯವಸ್ಥೆಗಳಿಗಾಗಿ ಸಂಬಂಧಪಟ್ಟ ಸಚಿವರಿಗೂ ವಿವರವಾದ ವರದಿಯನ್ನು ನೀಡಿರುವುದಾಗಿ ಹೇಳಿದ ಗೋಪಾಲ ಹೊಸೂರು, ಈಜುಗಾರಿಕೆಗೆ ಸಮೃದ್ಧವಾದ ಪ್ರದೇಶವಾಗಿರುವ ಮಂಗಳೂರಿನಲ್ಲಿ ಅತ್ಯುತ್ತಮ ಈಜುಗಾರರಿದ್ದಾರೆ. ಅವರಿಗೆ ಹೆಚ್ಚಿನ ಉತ್ತೇಜನ ಅಗತ್ಯ ಎಂದು ಹೇಳಿದರು.

ಎಮ್ಮೆಕೆರೆಯಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣದ ಜತೆಗೆ, ಮಂಗಳಾ ಕ್ರೀಡಾಂಗಣದ ಸಮೀಪ ಮಹಿಳೆಯರಿಗಾಗಿ ವಾರ್ಮ್ ಅಪ್ ಈಜುಕೊಳವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಚಿಂತಿಸಲಾಗಿದೆ ಎಂದು ಶಾಸ ವೇದವ್ಯಾಸ ಕಾಮತ್ ಹೇಳಿದರು.

ಕಲ್ಲು, ಮಣ್ಣು ಸಿಮೆಂಟ್‌ನಿಂದ ವಿದ್ಯಾಸಂಸ್ಥೆ ಕಟ್ಟಲು ಹೊರಡುವುದು ಅದೊಂದು ಭ್ರಮೆಯಷ್ಟೆ. ಉತ್ತಮ ವಿದ್ಯಾಸಂಸ್ಥೆಯಾಗಬೇಕಾದರೆ ವಿದ್ಯಾರ್ಥಿ, ಅಧ್ಯಾಪಕ ವೃಂದ, ಪಾಲಕರನ್ನು ಒಳಗೊಂಡ ಆಡಳಿತ ವೃಂದ ಆಧಾರ ಸ್ತಂಭಗಳು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಹಾಗೂ ಜತೆಗೆ ಗುರುವಿದ್ದು, ಶ್ರದ್ಧೆಯಿಂದ ಗುರಿಯತ್ತ ಸಾಗಿದಾಗ ಕಾರ್ಯ ಸಾಕಾರ ಮಾಡಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಅಭಿಪ್ರಾಯಿಸಿದರು.

ವಿದ್ಯಾಭಾರತಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಮಾತನಾಡಿ ಶುಭ ಹಾರೈಸಿದರು. ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾಯ್ಕ್, ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್, ಎಂ.ಬಿ. ಪುರಾಣಿಕ್, ಕೋಶಾಧಿಕಾರಿ ಮುರಳೀಧರ್ ನಾಯ್ಕ್, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ (ಪ್ರಭಾರ) ಸುಧೀರ್ ಎಂ.ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ., ಶಕ್ತಿ ಪ್ರಿಸ್ಕೂಲ್ ಸಂಯೋಜಕಿ ನೀಮಾ ಸಕ್ಸೇನಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸಂಜಿತ್ ನಾಯ್ಕ್ ಸ್ವಾಗತಿಸಿದರು. ಮುಖ್ಯ ಸಲಹೆಗಾರ ರಮೇಶ್ ಕೆ. ದಿಕ್ಸೂಚಿ ಭಾಷಣ ಮಾಡಿದರು. ಶ್ರೀವರ ವಂದಿಸಿದರು.

ಅಡಿಟೋರಿಯಂ- ಈಜುಕೊಳ ವಿಶೇಷತೆ

ರೇಷ್ಮಾ ಆಡಿಟೋರಿಯಂ 1000 ವಿದ್ಯಾರ್ಥಿಗಳು ಆಸೀನರಾಗುವ ಸಾಮರ್ಥ್ಯ ಹೊಂದಿದೆ. ಸುಮಾರು 25 ಮೀಟರ್ ಉದ್ದ ಹಾಗೂ 6 ಅಡಿ ಆಳ ಹೊಂದಿರುವ ಈಜುಕೊಳದಲ್ಲಿ ಈಜು ತಜ್ಞರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News