ಕರಾವಳಿಯಲ್ಲಿ ‘ಸೀಪ್ಲೇನ್’ ಟೂರಿಸಂಗೆ ಕೇಂದ್ರಕ್ಕೆ ಪ್ರಸ್ತಾವನೆ: ಮೀಟ್ ದಿ ಪ್ರೆಸ್‌ನಲ್ಲಿ ಸಚಿವ ಯೋಗೀಶ್ವರ್

Update: 2021-02-27 13:56 GMT

ಮಂಗಳೂರು, ಫೆ.27: ಕರಾವಳಿ ತೀರದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಇಲ್ಲಿನ ಉದ್ಯಮಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕರಾವಳಿಯ ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಸಲುವಾಗಿ ‘ಸೀಪ್ಲೇನ್’ ಟೂರಿಸಂನ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿಪಿ ಯೋಗೀಶ್ವರ್ ಹೇಳಿದರು.

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ‘ಮೀಟ್ ದಿ ಪ್ರೆಸ್’ನಲ್ಲಿ ಅವರು ಮಾತನಾಡಿದರು.

ಪ್ರವಾಸೋದ್ಯಮ ವೃದ್ಧಿಸಲು ಮಂಗಳೂರನ್ನು ಸರಕಾರವೇ ಬ್ರಾಂಡ್ ಮಾಡಬೇಕಿದೆ. ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಧಾರ್ಮಿಕ ಕೇಂದ್ರಗಳ ಮೂಲಕ ದ.ಕ.ಜಿಲ್ಲೆಯು ಪ್ರವಾಸೋದ್ಯಮಕ್ಕೆ ಎಲ್ಲಾ ರೀತಿಯ ಅವಕಾಶ ಕಲ್ಪಿಸಲು ಸಾಧ್ಯವಿದೆ. ವಿದೇಶಿ ಪ್ರವಾಸಿಗರನ್ನು ಸೆಳೆಯಲು ಹೆಲಿ ಟೂರಿಸಂನ ಅಗತ್ಯವಿದೆ. ಸ್ಪೀಡ್ ಬೋಟ್ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದಾಗಿದೆ ಎಂದ ಸಚಿವ ಯೋಗೀಶ್ವರ್, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರವಾಸಿಗರ ಮೇಲೆ ವಿಧಿಸಲಾಗುವ ತೆರಿಗೆಯು ಅಧಿಕವಿದೆ ಎಂಬ ಆರೋಪವಿದೆ. ಇದನ್ನು ಕಡಿತಗೊಳಿಸುವ ಬಗ್ಗೆ ಮುಖ್ಯಮಂತ್ರಿಯ ಜೊತೆ ಚರ್ಚೆ ನಡೆಸುವೆ. ಕೇರಳದಲ್ಲಿ ವಿನಾಯಿತಿ ನೀಡಿದಂತೆ ಕರ್ನಾಟಕದಲ್ಲೂ ಸಿಆರ್‌ಝೆಡ್ ನಿಯಮಾವಳಿಗೆ ವಿನಾಯಿತಿ ನೀಡಲು ಪ್ರಯತ್ನಿಸಲಾಗುವುದು ಎಂದರು.

ಈಗಾಗಲೆ ರಾಜ್ಯ ಸರಕಾರ ಪ್ರವಾಸೋದ್ಯಮ ನೀತಿಯನ್ನು ಅಂತಿಮಗೊಳಿಸಿದ್ದು, ಎಪ್ರಿಲ್‌ನಲ್ಲಿ ಅದನ್ನು ಜಾರಿಗೊಳಿಸಲಾಗುವುದು ಎಂದ ಸಚಿವ ಯೋಗೀಶ್ವರ್, ಪ್ರವಾಸೋದ್ಯಮ ಬೆಳೆಯಲು ಸರಕಾರದ ಜೊತೆ ಖಾಸಗಿ ಸಹಭಾಗಿತ್ವವೂ ಅಗತ್ಯವಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪತ್ರಕರ್ತ ವಿಜಯ್ ‌ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News