'ನಿಯಮ ಮೀರಿ ನೀಡಲಾದ ರಿಕ್ಷಾ ಪರ್ಮಿಟ್ ರದ್ದತಿಗೆ ಹೈಕೋರ್ಟ್ ಆದೇಶ'

Update: 2021-02-27 13:58 GMT

ಮಂಗಳೂರು, ಫೆ.27: ರಾಜ್ಯ ಸರಕಾರದ ಆದೇಶವಿಲ್ಲದಿದ್ದರೂ ಕೂಡ ದ.ಕ.ಜಿಲ್ಲಾಡಳಿತವು ನಿಯಮ ಮೀರಿ ಕಳೆದ ಐದು ವರ್ಷದ ಹಿಂದೆ ಶ್ರೀಮಂತರಿಗೆ ನೀಡಲಾದ ಸುಮಾರು 1,250 ರಿಕ್ಷಾ ಪರ್ಮಿಟ್‌ಗಳನ್ನು ರದ್ದುಗೊಳಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದ.ಕ.ಜಿಲ್ಲಾ ರಿಕ್ಷಾ ಘಟಕದ ಸಲಹೆಗಾರ ಅರುಣ್ ಕುಮಾರ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2014-15ನೆ ಸಾಲಿನಲ್ಲಿ ಸರಕಾರದ ಆದೇಶವಿಲ್ಲದಿದ್ದರೂ ಕೂಡ ವಿವಿಧ ನಿಗಮದಿಂದ ಸ್ವ ಉದ್ಯೋಗ ಮಾಡುವ ಯೋಜನೆಯಡಿ 1,250 ರಿಕ್ಷಾ ಪರ್ಮಿಟ್ ನೀಡಲಾಗಿದೆ. ಇದರಲ್ಲಿ ಶೇ.2ರಷ್ಟು ಮಾತ್ರ ನೈಜ ರಿಕ್ಷಾ ಚಾಲಕರಿದ್ದಾರೆ. ಉಳಿದಂತೆ ಎಲ್ಲರೂ ಕೂಡ ಶ್ರೀಮಂತ ವರ್ಗಕ್ಕೆ ಸೇರಿದವರಾಗಿದ್ದಾರೆ. ಅಂದರೆ ಬಸ್ ಮಾಲಕರು, ದೊಡ್ಡ ದೊಡ್ಡ ಕಂಪೆನಿಗಳ ಉದ್ಯೋಗಿಗಳು, ಸ್ವಂತ ಉದ್ಯಮ ನಡೆಸುವವರು, ಎರಡ್ಮೂರು ಜೆಸಿಬಿ ಹೊಂದಿದವರು, ಸ್ವಿಮ್ಮಿಂಗ್‌ಫೂಲ್‌ನ ಕೋಚರ್ ಆಗಿರು ವವರು ಪರ್ಮಿಟ್ ಪಡೆದಿದ್ದಾರೆ. ಇದಕ್ಕೆ ಪ್ರಮುಖ ಜನಪ್ರತಿನಿಧಿಗಳು ಶಿಫಾರಸು ಪತ್ರ ನೀಡಿದ್ದರೆ, ಅಧಿಕಾರಿಗಳು ವಾಸ್ತಾಂಶ ಮರೆತು ಪರ್ಮಿಟ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಕರಾವೇ ರಿಕ್ಷಾ ಘಟಕ ಹೈಕೋರ್ಟ್ ಮೆಟ್ಟಲೇರಿತ್ತು. ಇದೀಗ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ 1,250 ರಿಕ್ಷಾ ಪರ್ಮಿಟ್‌ಗಳನ್ನು ರದ್ದುಗೊಳಿಸಿ ಆದೇಶಿಸಿದೆ ಎಂದರು.

ರಿಕ್ಷಾ ಪರ್ಮಿಟ್ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದ ಬಗ್ಗೆ ಮಾಹಿತಿ ಪಡೆದ ನಾವು ದಾಖಲೆಗಳನ್ನು ಸಂಗ್ರಹಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೆವು. 2019ರ ಫೆಬ್ರವರಿಯಲ್ಲೇ ನಮಗೆ ಜಯ ಲಭಿಸಿತ್ತು. ಆದರೆ ಹೈಕೋರ್ಟ್‌ನ ಆದೇಶವನ್ನು ಅಂದಿನ ಜಿಲ್ಲಾಧಿಕಾರಿ ಹಾಗೂ ಆರ್‌ಟಿಒ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಇದನ್ನು ಪ್ರಶ್ನಿಸಿ ನಾವು ಮತ್ತೆ ಹೈಕೋರ್ಟ್ ಮೆಟ್ಟಲೇರಿದ್ದೆವು. ಈ ವರ್ಷದ ಜನವರಿಯಲ್ಲಿ ಹೈಕೋರ್ಟ್ ಅದನ್ನು ಪುರಸ್ಕರಿಸಿ ನಮ್ಮ ಹೋರಾಟಕ್ಕೆ ಸ್ಪಂದಿಸಿದೆ. ಆದರೆ, ಜಿಲ್ಲಾಡಳಿತವು ಹೈಕೋರ್ಟ್ ಆದೇಶ ಪಾಲಿಸದೆ ಪರ್ಮಿಟ್‌ ದಾರರಿಗೆ ನೋಟಿಸ್ ಜಾರಿಗೊಳಿಸಿ ಸುಮ್ಮನಾಗಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಅರುಣ್ ಕುಮಾರ್ ನುಡಿದರು.

ಪರ್ಮಿಟ್ ದಂಧೆಯಲ್ಲಿ ಬ್ರೋಕರ್‌ಗಳ ಹಾವಳಿ ಮಿತಿ ಮೀರಿದೆ. ಈ ಬಗ್ಗೆ ನಾವು ಲೋಕಾಯುಕ್ತಕ್ಕೂ ದೂರು ನೀಡಿದ್ದೆವು. ಎಲ್ಲಾ ಕಡೆ ನಮ್ಮ ಹೋರಾಟಕ್ಕೆ ಸ್ಪಂದನೆ ಸಿಕ್ಕಿದ್ದರೂ ಕೂಡ ಜಿಲ್ಲಾಮಟ್ಟದ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲಿಸಲು ಮೀನಾಮೇಷ ಮಾಡುತ್ತಿದ್ದಾರೆ. ನಗರದಲ್ಲಿ ಈ ಹಿಂದೆ 68 ರಿಕ್ಷಾ ಪಾರ್ಕ್‌ಗಳಿತ್ತು. ಸ್ಮಾರ್ಟ್ ಯೋಜನೆ ಜಾರಿಗೊಳಿಸುವಾಗ 18 ರಿಕ್ಷಾ ಪಾರ್ಕ್‌ಗಳನ್ನು ಎತ್ತಂಗಡಿ ಮಾಡಲಾಗಿದೆ. ಉಳಿದ 50 ಪಾರ್ಕ್‌ಗಳಲ್ಲಿ ನಗರದಲ್ಲಿರುವ 7 ಸಾವಿರ ರಿ್ಷಾಗಳು ಪಾರ್ಕ್ ಮಾಡಲು ಸಾಧ್ಯವಿಲ್ಲ. ಶಾಸಕರು, ಕಾರ್ಪೊರೇಟರ್‌ಗಳು ಈ ಬಗ್ಗೆ ವ್ಯವಸ್ಥೆ ಕಲ್ಪಿಸದೆ ಅಕ್ರಮ ಪರ್ಮಿಟ್ ನೀಡಲು ಉತ್ತೇಜನ ನೀಡುತ್ತಿರುವುದು ವಿಪರ್ಯಾಸ ಎಂದರು.

ಸುದ್ದಿಗೋಷ್ಠಿಯಲ್ಲಿ ಘಟಕದ ಮುಖಂಡರಾದ ಜೆರಾಲ್ಡ್ ಡಿಕುನ್ಹ, ಪದ್ಮನಾಭ ಶೆಟ್ಟಿ, ಝಾಕಿರ್ ಹುಸೈನ್, ಕನಕಪ್ಪ ಮಾದರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News