ಜನರ ನೋವಿಗೆ ಸ್ಪಂದಿಸದ ಸರಕಾರಗಳು ಯಾತಕ್ಕಾಗಿ ?: ಡಿ.ಕೆ.ಶಿವಕುಮಾರ್

Update: 2021-02-27 15:22 GMT

ಬೈಂದೂರು, ಫೆ.27: ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ರೈತರು, ಕಾರ್ಮಿಕರು, ಮಹಿಳೆಯರು, ಬಡವರು ಹಾಗೂ ಜನಸಾಮಾನ್ಯರ ಹಿತಾಸಕ್ತಿಯನ್ನು ಮರೆತು ವ್ಯವಹರಿಸುತ್ತಿವೆ. ಕೊರೋನ ಬಳಿಕ ಸರಕಾರಗಳ ಕಿರುಕುಳ ಹೆಚ್ಚಾಗಿದೆ. ಒಂದೆಡೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ  ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಸರಕಾರಗಳ ಜನವಿರೋಧಿ ಆಡಳಿತದಿಂದ ಜನ ರೊಚ್ಚಿಗೆದ್ದಿದ್ದಾರೆ. ಜನರ ಪರವಾಗಿ ಜನ ಅನುಭವಿಸುತ್ತಿರುವ ನೋವಿನ ಸಂಕೇತ ಈ ಕಾರ್ಯಕ್ರಮ. ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಜನಧ್ವನಿ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ  ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕಳೆದ ಫೆ.22ರಂದು ಹೆಜಮಾಡಿಯಿಂದ ಪ್ರಾರಂಭಗೊಂಡ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಮಾರಂಭ ಇಂದು ಅಪರಾಹ್ನ ಬೈಂದೂರಿನಲ್ಲಿ ನಡೆದಿದ್ದು, ಈ ಕಾರ್ಯಕ್ರಮದ ಸಮಾರೋಪ ಭಾಷಣ ದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡುತಿದ್ದರು.

‘ಜನಧ್ವನಿ’ ಪಾದಯಾತ್ರೆ ಜನರ ನೋವಿನ ಸಂಕೇತ. ಜನರ ಪ್ರತಿದಿನದ ಬದುಕಿನಲ್ಲಿ, ಭಾವನೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಈ ಪಾದಯಾತ್ರೆ ಯಲ್ಲಿ ಪಕ್ಷದ ಎಲ್ಲ ನಾಯಕರುಗಳು ಐಕ್ಯತೆಯ ಪ್ರದರ್ಶನ ಮಾಡಿದ್ದಾರೆ. ಸರಕಾರಗಳ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಜಿಲ್ಲೆಯ ಶಾಸಕರು ವಿಫಲ: ಜಿಲ್ಲೆಯ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಜಿಲ್ಲೆಯ ಶಾಸಕರು ವಿಫಲರಾಗಿದ್ದಾರೆ. ಜನರು ರೊಚ್ಚಿಗೆದ್ದಿದ್ದಾರೆ. ಭಾವನೆಗಳು ಕೆರಳಿವೆ. ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಡಿಕೆಶಿ, ತಾನು ಶೋಭಕ್ಕಿನಿಗೆ, ಸದಾನಂದ ಗೌಡರಿಗೆ, ರಾಘವೇಂದ್ರನಿಗೆ ಭಾಷಣ ಮಾಡಲು ಬಂದಿದ್ದೇನೆ ಎಂದರು.

ಕರಾವಳಿಯಲ್ಲಿ ಹುಟ್ಟಿದ ಕಾರ್ಪೋರೇಷನ್, ಸಿಂಡಿಕೇಟ್, ವಿಜಯಾ ಬ್ಯಾಂಕಗಳನ್ನು ಇಂದಿರಾ ಗಾಂಧಿ ರಾಷ್ಟ್ರೀಕರಣ ಮಾಡಿದ್ದರು. ಇಂದು ಆ ಬ್ಯಾಂಗಳನ್ನು ಏಕಾಏಕಿ ವಿಲೀನ ಗೊಳಿಸಿದಾಗ ನೀವು ಎಲ್ಲಿದ್ದಿರಿ ಎಂದು ಸಂಸದರನ್ನು ನೇರವಾಗಿ ಪ್ರಶ್ನಿಸಿದರು.ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟ ಬ್ಯಾಂಕಗಳನ್ನೇ ಸಮಾಧಿ ಮಾಡಿದಿರಲ್ಲ, ಆಗ ನಿಮ್ಮ ಧ್ವನಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ನಮ್ಮ ಬಳಿ ಇದ್ದವರನ್ನು ಕರೆದುಕೊಂಡು ಹೋಗಿ ಸರಕಾರ ಮಾಡಿದ್ದೀರಿ. ನಿಮ್ಮ ಜನ, ನಿಮ್ಮ ಆಡಳಿತವೇ ನಿಮಗೆ ಸರಿಯಾದ ಪಾಠ ಕಲಿಸುತ್ತದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತಿದ್ದಾರೆ. ಬೀಡಿ ಕಾರ್ಮಿಕರ ಮೇಲೂ ದಬ್ಬಾಳಿಕೆ ಮಾಡುತ್ತೀರಿ. ನೀವು ಯಾರನ್ನೂ ಬದುಕಲು ಬಿಡುತ್ತೀಲ್ಲ ಎಂದು ದೂರಿದರು.

ಮತ್ತೆ ಕಾಂಗ್ರೆಸ್ ಬಾವುಟ: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಧರ್ಮ, ಜಾತಿ ಒಂದೇ. ನಮ್ಮದು ಮಾನವ ತತ್ತ್ವ. ಯಾರು ಸಹ ಅರ್ಜಿ ಹಾಕಿ ಈ ಜಾತಿ, ಧರ್ಮದಲ್ಲಿ ಹುಟ್ಟೊಲ್ಲ. ಪ್ರತಿ ಮಾನವನಿಗೆ ಇರುವ ಸಮಸ್ಯೆಯನ್ನು ಅರಿತು ಜೊತೆಗೆ ನಿಲ್ಲುವ ಪಕ್ಷ ನಮ್ಮದು. ಜನಧ್ವನಿ ಪಾದಯಾತ್ರೆ ಎಲ್ಲ ಜಿಲ್ಲೆಗಳಲ್ಲಿ ಮುಂದುವರಿಯಲಿದೆ. 2023ರ ಚುನಾವಣೆಯಲ್ಲಿ ಮತ್ತೆ ವಿಧಾನಸೌಧದಲ್ಲಿ ಕಾಂಗ್ರೆಸ್ ಬಾವುಟ ಹಾರಾಡಲಿದ್ದು, ನಿಮ್ಮ ಸಹಕಾರದಿಂದ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎನ್ನುವ ನಂಬಿಕೆ ನನಗಿದೆ ಎಂದು ಅವರು ಭವಿಷ್ಯ ನುಡಿದರು. ಬಿಜೆಪಿ ಬಾರುಗೋಲು, ಕಾಂಗ್ರೆಸ್ ಊರುಗೋಲು ಎಂಬುದನ್ನು ಮರೆಯ ಬೇಡಿ ಎಂದವರು ಜನರನ್ನುದ್ದೇಶಿಸಿ ನುಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ ಸೊರಕೆ, ಅಭಯಚಂದ್ರ ಜೈನ್, ಪ್ರಮೋದಮಧ್ವರಾಜ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಎಂ.ಎ.ಗಫೂರ್, ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ರಾಜು ಪೂಜಾರಿ, ಮದನ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಬಾಕ್ಸ್ ಮಾಡಿ
ಬಿಜೆಪಿ-ಜೆಸಿಬಿ
ಒಂದು ಮನೆಯನ್ನು ಕಟ್ಟಲು ನೂರಾರು ಜನರು ಬೇಕು. ಅದನ್ನು ಕೆಡವಲು ಬೇಕಾದ ಜೆಸಿಬಿ ಕೆಲಸವನ್ನು ಬಿಜೆಪಿ ಇಂದು ಮಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣಕ್ಕೆ ಒತ್ತು ನೀಡಿದ್ದರೆ, ಇಂದಿನ ಸರಕಾರ ಖಾಸಗೀಕರಣ ಮಾಡುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ನೇಕಾರರು, ಸವಿತಾ ಸಮಾಜದವರು, ದರ್ಜಿಯವರು ಹೀಗೆ ಪ್ರತಿಯೊಂದು ವೃತ್ತಿಯವರು ಆರು ತಿಂಗಳುಗಳ ಕೆಲಸ ಕಳೆದುಕೊಂಡರು. ಅವರ ನೋವಿಗೆ ಸರಕಾರ ಸ್ಪಂದಿಸಲಿಲ್ಲ ಎಂದು ಅವರು ದೂರಿದರು.
ಜನರ ಧ್ವನಿಯನ್ನು ಆಲಿಸಲು ಸರಕಾರ ವಿಫಲವಾಗಿದೆ. ದೇಶದಲ್ಲಿ ನಿರಂತರವಾಗಿ ರೈತರ ಹೋರಾಟ ನಡೆಯುತ್ತಿದ್ದರೆ ರೈತರಲ್ಲಿಗೆ ತೆರಳಿ ರೈತರ ಬೇಡಿಕೆ ಆಲಿಸಲು ಪ್ರಧಾನ ಮಂತ್ರಿಗಳಿಗೆ ಸಾಧ್ಯವಿಲ್ಲ . ಪ್ರಧಾನ ಮಂತ್ರಿಗಳೇ ಯಾರ್ಯಾರದೋ ಮನೆ ಮದುವೆಗೆ ಹೋಗ್ತೀರಿ, ಆದರೆ ರೈತರ ಬಳಿ ಹೋಗಲ್ವಾ? ಹೋಗಲ್ಲಾ ಅಂದ್ರೆ ಅಂಥ ಸರಕಾರ ಯಾಕೆ ಇರ್ಬೇಕು ಎಂದು ಪ್ರಶ್ನಿಸಿದ ಡಿಕೆಶಿ, ಕಾಂಗ್ರೆಸ್ ಕಟ್ಟಿದ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದರಲ್ಲೇ ನರೇಂದ್ರ ಮೋದಿ ಸರಕಾರ ನಿರತವಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News