ತೇಲುವ ರೆಸ್ಟೋರೆಂಟ್, ಹೌಸ್‌ಬೋಟಿಂಗ್‌ಗೆ ಪ್ರಸ್ತಾಪ ಕಳುಹಿಸಿ: ಯೋಗೇಶ್ವರ್

Update: 2021-02-27 16:04 GMT

ಪಡುಬಿದ್ರಿ, ಫೆ.27: ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶ ಗಳಿದ್ದು, ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯಬಲ್ಲ ತೇಲುವ ರೆಸ್ಟೋರೆಂಟ್, ಹೌಸ್ ಬೋಟಿಂಗ್‌ನಂಥ ಹೊಸ ಹೊಸ ಪ್ರಸ್ತಾಪಗಳನ್ನು ಕಳುಹಿಸಿದರೆ, ಕೂಡಲೇ ಪರಿಶೀಲಿಸಿ ಮಂಜೂರುಗೊಳಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ತಿಳಿಸಿದ್ದಾರೆ.

ಪಡುಬಿದ್ರಿ ಸಮೀಪದ ಎಂಡ್‌ಪಾಯಿಂಟ್‌ನಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಪ್ಲಾಗ್ ಬೀಚ್‌ಗೆ ಇಂದು ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಬಳಿಕ ಅವರು ಕಾಪು ಬೀಚ್ ಹಾಗೂ ಅಲ್ಲಿನ ಲೈಟ್‌ಹೌಸ್‌ಗೂ ಪ್ರದೇಶಕ್ಕೂ ಭೇಟಿ ನೀಡಿದರು.

ಕಾಪು ತಾಲೂಕಿನ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ಹಾಗೂ ಕಾಪು ಬೀಚ್‌ಗೆ ಒಟ್ಟು 12 ಕೋಟಿ ರೂ. ಅನುದಾನ ಒದಗಿಸುವುದಾಗಿ ತಿಳಿಸಿದ ಅವರು, ಲೈಟ್‌ಹೌಸ್ ಬಂಡೆಯಿಂದ ಸಂಪರ್ಕ ಸೇತುವೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ 2 ಕೋಟಿ ರೂ. ನೀಡುವುದಾಗಿ ಸಿ. ಪಿ.ಯೋಗೇಶ್ವರ್ ಭರವಸೆ ನೀಡಿದರು.

ಪ್ರವಾಸಿಗರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶಾಸಕ ಲಾಲಾಜಿ ಮೆಂಡನ್ ಒತ್ತಾಯಿಸಿದ್ದಾರೆ. ವಾಹನ ದಟ್ಟನೆ ಯನ್ನು ಸುಸ್ಥಿತಿಗೆ ತರಲು ಎರಡು ಸೇತುವೆಗಳ ರಚನೆ ಸಹಿತವಾಗಿ ರಸ್ತೆ ಅಗಲೀಕರಣಗಳಿಗಾಗಿ 10ಕೋಟಿ ರೂ. ಹಾಗೂ ಕಾಪು ಬೀಚ್‌ನ ಅಭಿವೃದ್ಧಿಗೆ ಪ್ರಸ್ತಾವನೆಯು ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಬಳಿಯಿದೆ. ಇದಕ್ಕೆ ಶೀಘ್ರವೇ ಇಲಾಖಾ ಅನುಮೋದನೆ ನೀಡಲಾ ಗುವುದು ಎಂದು ಸಚಿವರು ನುಡಿದರು.

ಕರ್ನಾಟಕ ಕರಾವಳಿಯಲ್ಲಿ ಪ್ರವಾಸೋದ್ಯಮ ಕಾರಿಡಾರ್ ಸ್ಥಾಪಿಸುವ ಬಯಕೆಯಿದೆ. ಸಿಆರ್‌ಝೆಡ್ ನಿಯಮಗಳ ಸಡಿಲಿಕೆಯೂ ಆಗಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮವು ಕೇರಳ, ಗೋವಾಗಳಂತೆ ಅಭಿವೃದ್ಧಿಯಾಗಿಲ್ಲ. ಕೇರಳ, ತಮಿಳುನಾಡಿನಂತೆ ಉದ್ಯಮದ ಸ್ಥಾನಮಾನ ದೊಂದಿಗೆ ಇದನ್ನು ನಾವು ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ಖಾಸಗಿ ಹೊಟೇಲ್ ಉದ್ಯಮಿಗಳಿಗೂ 2020 - 25ರ ರಾಜ್ಯ ಪ್ರವಾಸೋದ್ಯಮ ನೀತಿಯಡಿ ಸಬ್ಸಿಡಿಯನ್ನು ನೀಡಲಿದ್ದೇವೆ. ಹೆಲಿ ಟೂರಿಸಂಗೂ ಪ್ರಾಮುಖ್ಯತೆಯು ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ಬಳಿಯೂ ಈ ಕುರಿತಾಗಿ ಚರ್ಚಿಸುವುದಾಗಿ ಹೇಳಿದರು.

ಪರಿಸರ ನೀತಿಯನ್ನು ಕೊರೋನೋತ್ತರವಾಗಿ ಸ್ವಚ್ಛತೆಯ ದೃಷ್ಟಿಯಿಂದ ಬಿಗಿ ಗೊಳಿಸಲಿದ್ದೇವೆ. ನಗರಸಭೆ, ಪುರಸಭಾ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ, ಎಸ್‌ಟಿಪಿ ಸಂಸ್ಕರಣಾ ಘಟಕಗಳು ಉತ್ತಮ ರೀತಿಯಲ್ಲಿ ಕಾರ್ಯವೆಸಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದೂ ಸಚಿವ ಯೋಗೇಶ್ವರ್ ತಿಳಿಸಿದರು.

ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿಯವರಿಗೆ ಅವಕಾಶವನ್ನು ನೀಡಲಿದ್ದೇವೆ. ಇಲ್ಲಿ ಖಾಸಗಿಯವರ ಮೂಲಕ ವಿವಿಧ ಜಲ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವಿದ್ದು, ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಅವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯು ಸರಕಾರಿ ಭೂಮಿಯನ್ನು ಗುರುತಿಸಿ ನಮಗೆ ವರದಿಯನ್ನು ಸಲ್ಲಿಸಿದರೆ, ಯಾವುದೇ ಖಾಸಗಿ ಕಂಪನಿಗಳು ಜಲ ಕ್ರೀಡೆಗಳನ್ನು ಆರಂಭಿಸಲು ಮುಂದೆ ಬಂದರೆ ಅದನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು. ನಾವು ಖಂಡಿತವಾಗಿಯೂ ಅವರನ್ನು ಪ್ರೋತ್ಸಾಹಿಸುತ್ತೇವೆ ಎಂದರು.

ಕಾಪು ಶಾಸಕ ಲಾಲಾಜಿ ಮೆಂಡನ್ ಅವರು ಪಡುಬಿದ್ರಿ ಬೀಚ್ ಹಾಗೂ ಕಾಪು ಕಡಲತೀರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಅಗತ್ಯತೆ ಕುರಿತು ಸಚಿವರ ಗಮನ ಸೆಳೆದರು. ಕರ್ನಾಟಕದಲ್ಲಿ ಪ್ರವಾಸೋದ್ಯಮ ಕೇರಳ ಮತ್ತು ಗೋವಾದಂತೆ ಅಭಿವೃದ್ಧಿ ಹೊಂದಿಲ್ಲ. ಈ ವಲಯವನ್ನು ಯಾರೂ ಉದ್ಯಮವಾಗಿ ತೆಗೆದುಕೊಳ್ಳುತ್ತಿಲ್ಲ. ಯಾರಾದರೂ ಮುಂದೆ ಬಂದರೆ ಸರಕಾರ ಅವರಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸಲಿದೆ. ಈ ನಿಟ್ಟಿನಲ್ಲಿ ಕರಾವಳಿ ಕರ್ನಾಟಕಕ್ಕೆ ಸರಕಾರ ವಿಶೇಷ ಒತ್ತು ನೀಡಲಿದೆ ಎಂದು ಭರವಸೆ ನೀಡಿದ ಅವರು, ನಮ್ಮಲ್ಲಿ 320 ಕಿ.ಮೀ ಉದ್ದದ ಕರಾವಳಿ ಭಾಗ ಇರುವುದರಿಂದ ಸಾಗರಮಾಲಾ ಯೋಜನೆ ಕುರಿತು ಚರ್ಚಿಸಲು ನಾವು ಪ್ರಧಾನಿಯನ್ನು ಸಂಪರ್ಕಿಸುತ್ತಿದ್ದೇವೆ ಎಂದರು.

ಇನ್ನು ಉಡುಪಿಯ ಮರೀನಾ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಲು ನಿರಾಕರಿಸಿದರು.

ಉಡುಪಿ ಜಿಲ್ಲಾಪಿಕಾರಿ ಜಿ. ಜಗದೀಶ್, ಕಾಪು ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಸೋಮಶೇಖರ್, ಕರಾವಳಿ ಪ್ರವಾಸೋದ್ಯಮ ಸಂಸ್ಥೆಯ(ಆ್ಯಕ್ಟ್)ನ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಮತ್ತು ಕಾರ್ಯದರ್ಶಿ ಗೌರವ್ ಶೇಣವ, ಬ್ಲೂ ಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ್ ಶೆಟ್ಟಿ, ಅದಾನಿ ಕರ್ನಾಟಕ ಯೋಜನೆಗಳ ಅಧ್ಯಕ್ಷ ಕಿಶೋರ್ ಆಳ್ವ, ಯುಪಿಸಿಎಲ್ ಮಹಾ ಪ್ರಬಂಧಕ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News