ಸಾಮಾಜಿಕ ಮಾಧ್ಯಮದ ನಿಯಮ ಕೇಂದ್ರ ಸರಕಾರದ ‘ಸವಾರ್ಧಿಕಾರಿ’ ಧೋರಣೆ: ಸಚಿವ ಸತೇಜ್ ಪಾಟೀಲ್

Update: 2021-02-27 17:03 GMT
photo: twitter.com/satejp

ಮುಂಬೈ, ಫೆ. 27: ಸಾಮಾಜಿಕ ಮಾಧ್ಯಮ ಹಾಗೂ ಒಟಿಟಿ ಸಂಸ್ಥೆಗಳ ಮೇಲೆ ಕೇಂದ್ರ ಸರಕಾರದ ನಿಯಂತ್ರಣವನ್ನು ವಿರೋಧಿಸಿರುವ ಮಹಾರಾಷ್ಟ್ರ ಸಚಿವ ಸತೇಜ್ ಪಾಟೀಲ್, ಇದು ಸರ್ವಾಧಿಕಾರಿ ಧೋರಣೆ ಹಾಗೂ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದಿದ್ದಾರೆ.

ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ ಹಾಗೂ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುವುದರಿಂದ ಈ ನಿಯಮವನ್ನು ತೀವ್ರವಾಗಿ ವಿರೋಧಿಸಬೇಕಾದ ಅಗತ್ಯ ಇದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ಸತೇಜ್ ಪಟೇಲ್ ಹೇಳಿದ್ದಾರೆ. ಕೇಂದ್ರ ಸರಕಾರದ ಈ ನಡೆಯನ್ನು ತೀವ್ರವಾಗಿ ವಿರೋಧಿಸುವ ಅಗತ್ಯ ಇದೆ. ಇಂತಹ ಸರ್ವಾಧಿಕಾರಿ ಧೋರಣೆಯ ನಿಯಂತ್ರಣವನ್ನು ಪ್ರಜಾಪ್ರಭುತ್ವ ದೇಶದ ಜನರನ್ನು ಒಪ್ಪಿಕೊಳ್ಳಲಾರರು ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಯಾವುದನ್ನು ಪ್ರಕಟಿಸುವ ಅಗತ್ಯ ಇದೆ, ಯಾವುದು ಇಲ್ಲ ಎಂಬುದನ್ನು ಕೆಲವು ಅಧಿಕಾರಿಗಳು ನಿರ್ಧರಿಸುವುದು ಭಾರತದ ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿ ಹೊರತು ಬೇರೇನೂ ಅಲ್ಲ ಎಂದು ಅವರು ತಿಳಿಸಿದ್ದಾರೆ. ಇಂತಹ ಆದೇಶಗಳಿಗೆ ನ್ಯಾಯಾಲಯದಲ್ಲಿ ಮಹತ್ವ ಇರಲಾರದು ಎಂದು ಅವರು ಹೇಳಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ‘ಟೂಲ್ ಕಿಟ್’ ಹಂಚಿಕೊಂಡಿರುವಲ್ಲಿ ಭಾಗಿಯಾದ ಆರೋಪದಲ್ಲಿ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News