ಇಂಟರ್‌ನೆಟ್ ಕಂಟೆಂಟ್ ನಿರ್ಬಂಧ ನಿಯಮ ಹೊಸದಲ್ಲ: ಕೇಂದ್ರದಿಂದ ಡಿಜಿಟಲ್ ಮಾಧ್ಯಮ ಮಾರ್ಗಸೂಚಿ ಸಮರ್ಥನೆ

Update: 2021-02-27 18:02 GMT

ಹೊಸದಿಲ್ಲಿ, ಫೆ. 27: ತುರ್ತು ಸಂದರ್ಭದಲ್ಲಿ ಇಂಟರ್‌ನೆಟ್ ಕಂಟೆಂಟ್ ಅನ್ನು ನಿರ್ಬಂಧಿಸುವ ನೂತನ ಡಿಜಿಟಲ್ ಮೀಡಿಯಾ ಮಾರ್ಗಸೂಚಿಗಳ ನಿಯಮ 2009ರಿಂದಲೇ ಅಸ್ತಿತ್ವದಲ್ಲಿ ಇದೆ. ಇತ್ತೀಚೆಗೆ ಪರಿಚಯಿಸಿರುವುದು ಅಲ್ಲ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿದೆ.

ತುರ್ತು ಸಂದರ್ಭದಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅವರು ಇಂಟರ್‌ನೆಟ್ ಕಂಟೆಂಟ್‌ಗೆ ಮಧ್ಯಂತರ ನಿರ್ಬಂಧ ಹೇರುವ ನಿರ್ದೇಶನ ನೀಡಬಹುದು ಎಂದು ಉಲ್ಲೇಖಿಸಿದ ಮಾರ್ಗಸೂಚಿಯ 3ನೇ ಭಾಗದ ಅಡಿಯ ನಿಯಮ 16ಕ್ಕೆ ಸಂಬಂಧಿಸಿ ಕೆಲವು ಅನುಮಾನಗಳನ್ನು ಎತ್ತಲಾಗುತ್ತಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

‘‘ಇದು ಹೊಸ ನಿಯಮವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ. 2009ರಿಂದ ಕಳೆದ 11 ವರ್ಷಗಳು ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವುದನ್ನು ನಿರ್ಬಂಧಿಸುವ ಕಾರ್ಯವಿಧಾನ ಹಾಗೂ ಸುರಕ್ಷೆಗಳು)ನಿಯಮ 2009ರ ಅಡಿಯಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅವರು ಈ ನಿಯಮವನ್ನು ಚಲಾಯಿಸಿದ್ದರು’’ ಎಂದು ಹೇಳಿಕೆ ತಿಳಿಸಿದೆ. ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಹಾಗೂ ಡಿಜಿಟಲ್ ಮೀಡಿಯಾ ನೀತಿ ಸಂಹಿತೆ)ನಿಯಮ-2021ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಅಥವಾ ಹೊಸ ನಿಯಮ ಸೇರಿಸಿಲ್ಲ ಎಂಬುದನ್ನು ಪುನರುಚ್ಚರಿಸುತ್ತೇವೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಹೇಳಿದೆ.

ಹೊಸ ಪ್ರಕಾಶಕರು, ಒಟಿಟಿ ಸಂಸ್ಥೆಗಳು ಹಾಗೂ ಡಿಜಿಟಲ್ ಮೀಡಿಯಾಗಳಿಗೆ ನೀತಿ ಸಂಹಿತೆ ಹಾಗೂ ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯ ವಿಧಾನವನ್ನು ಅನ್ವಯಿಸಲಾಗುವುದು ಎಂದು ಕೇಂದ್ರ ಸರಕಾರ ಗುರುವಾರ ಹೇಳಿತ್ತು. ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಈ ವಾರ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿ ಹಾಗೂ ಡಿಜಿಟಲ್ ಮೀಡಿಯ ನೀತಿ ಸಂಹಿತೆ) ನಿಯಮ 2021ನ್ನು ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News