ಅಧ್ಯಕ್ಷರ ವಿರುದ್ಧ ಕೇಂದ್ರಕ್ಕೆ ನಿರ್ದೇಶಕಿಯ ಪತ್ರ: ಐಐಎಂ-ಸಿ ಆಡಳಿತ ಮಂಡಳಿಯ ಆಕ್ಷೇಪ

Update: 2021-02-27 18:07 GMT

ಹೊಸದಿಲ್ಲಿ,ಫೆ.27: ಸಂಸ್ಥೆಯ ಅಧ್ಯಕ್ಷರ ವಿರುದ್ಧ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿದ್ದಕ್ಕಾಗಿ ನಿರ್ದೇಶಕಿ ಅಂಜು ಸೇಠ್ ವಿರುದ್ಧ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಕಲಕತ್ತಾ)ನ ಆಡಳಿತ ಮಂಡಳಿಯು ನಿರ್ಣಯವೊಂದನ್ನು ಅಂಗೀಕರಿಸಿದೆ.

ಅಂಜು ಸೇಠ್ 2018 ನವೆಂಬರ್‌ನಲ್ಲಿ ಐಐಎಂ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿದ್ದ ಮೊದಲ ಮಹಿಳೆಯಾಗಿದ್ದು,ಅವರ ಅಧಿಕಾರಾವಧಿಯು ಈ ವರ್ಷ ಅಂತ್ಯಗೊಳ್ಳುತ್ತದೆ. ಸಂಸ್ಥೆಯ ವ್ಯವಹಾರಗಳ ನಿರ್ವಹಣೆಯ ಬಗ್ಗೆ ಸೇಠ್ ಮತ್ತು ಶ್ರೀಕೃಷ್ಣ ಕುಲಕರ್ಣಿ ಅಧ್ಯಕ್ಷತೆಯ ಆಡಳಿತ ಮಂಡಳಿ ನಡುವೆ ಆಗಾಗ್ಗೆ ಜಟಾಪಟಿ ನಡೆಯುತ್ತಲೇ ಇತ್ತು.

ಐಐಎಂ ಕಾಯ್ದೆಯಲ್ಲಿ ಬದಲಾವಣೆಗಳನ್ನು ತಂದ ಬಳಿಕ ಐಐಎಂ ಮಂಡಳಿಯೊಂದು ಇದೇ ಮೊದಲ ಬಾರಿಗೆ ಇಂತಹ ನಿರ್ಣಯವೊಂದನ್ನು ಅಂಗೀಕರಿಸಿದೆ. ಫೆ.20ರಂದು ಅಂಗೀಕರಿಸಲಾದ ನಿರ್ಣಯದಲ್ಲಿ ಆಡಳಿತ ಮಂಡಳಿಯು,ಸೇಠ್ ಅಧ್ಯಕ್ಷರ ವಿರುದ್ಧ ನೇರವಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಮತ್ತು ಅವರು ಬೋಧಕ ವರ್ಗದೊಂದಿಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ. ಸೇಠ್ ನಡವಳಿಕೆಯನ್ನು ಪರಿಶೀಲಿಸಲೂ ನಿರ್ಧರಿಸಿರುವ ಅದು,ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸುವಂತೆ ಮತ್ತು ಸಾಧ್ಯವಾದಷ್ಟು ಶೀಘ್ರ ತನ್ನೆದುರು ಮಂಡಿಸುವಂತೆ ಸಂಸ್ಥೆಯ ಕಾರ್ಯದರ್ಶಿಗೆ ನಿರ್ದೇಶ ನೀಡಿದೆ.

ಆಡಳಿತ ಮಂಡಳಿಯ ನಿರ್ದೇಶಕರ ವಿಚಾರಣೆಯನ್ನು ನಡೆಸಿ ಮತ್ತು ತನ್ನ ಅಭಿಪ್ರಾಯವನ್ನು ತಿಳಿಸಲು ಅವರಿಗೆ ನ್ಯಾಯಯುತ ಅವಕಾಶವನ್ನು ನೀಡಿದ ಬಳಿಕವಷ್ಟೇ ಅವರನ್ನು ಹುದ್ದೆಯಿಂದ ವಜಾಗೊಳಿಸಬಹುದು ಎಂದು ನೂತನ ಐಐಎಂ ಕಾಯ್ದೆಯಲ್ಲಿ ಹೇಳಲಾಗಿದೆ. ಮಂಡಳಿಯ ನಿರ್ಣಯವು ಸೇಠ್ ವಿರುದ್ಧ ವಿಚಾರಣೆಗೆ ಅವಕಾಶ ಕಲ್ಪಿಸಬಹುದೇ ಎನ್ನುವುದು ಸ್ಪಷ್ಟವಾಗಿಲ್ಲ.

ಕುಲಕರ್ಣಿ ಮತ್ತು ಶಿಕ್ಷಣ ಸಚಿವಾಲಯಕ್ಕೆ ಬರೆದಿದ್ದ ಪತ್ರಗಳಲ್ಲಿ ಸೇಠ್,ಅಧ್ಯಕ್ಷರು ತನ್ನ ಕಾರ್ಯಕಾರಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಐಐಎಂ ಕಾಯ್ದೆಯಡಿ ನೂತನ ನಿಯಮಗಳ ಕರಡು ಸಿದ್ಧಪಡಿಸುವಿಕೆ ಸಂದರ್ಭದಲ್ಲಿ ತನ್ನನ್ನು ಕಡೆಗಣಿಸಲಾಗಿತ್ತು ಎಂದೂ ಅವರು ಆರೋಪಿಸಿದ್ದರು.

ಸೇಠ್ ನೇರವಾಗಿ ಕೇಂದ್ರಕ್ಕೆ ಪತ್ರ ಬರೆದಿರುವುದು ಸಾರಾಸಗಟು ಅನುಚಿತ ವರ್ತನೆಯಾಗಿದೆ ಮತ್ತು ತಪ್ಪು ಮಾಹಿತಿಗಳ ಮೂಲಕ ಸಚಿವಾಲಯ ಹಾಗೂ ಆಡಳಿತ ಮಂಡಳಿಯ ನಡುವೆ ಗೊಂದಲವನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿದೆ ಎಂದಿರುವ ಮಂಡಳಿಯು,ಅವರು ಐಐಎಂ-ಸಿ ಬೋಧಕವೃಂದದೊಂದಿಗೆ ತನ್ನ ಭಿನ್ನಾಭಿಪ್ರಾಯದ ಬಗ್ಗೆ ರಾಷ್ಟ್ರೀಯ ದೈನಿಕವೊಂದಕ್ಕೆ ಸಂದರ್ಶನ ನೀಡಿದ್ದನ್ನೂ ಆಕ್ಷೇಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News