ಪ್ರಧಾನಿ ತಮಿಳುನಾಡಿನ ‘ರಿಮೋಟ್ ಕಂಟ್ರೋಲ್’ ಆಗ ಬಯಸುತ್ತಿದ್ದಾರೆ: ರಾಹುಲ್ ಗಾಂಧಿ

Update: 2021-02-28 18:10 GMT

ಹೊಸದಿಲ್ಲಿ, ಫೆ. 28: ನರೇಂದ್ರ ಮೋದಿ ಹಾಗೂ ಎಐಎಡಿಎಂಕೆ ಸರಕಾರದ ವಿರುದ್ಧ ರವಿವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಅವರು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮೂಲಕ ತಮಿಳುನಾಡಿನ ‘ರಿಮೋಟ್ ಕಂಟ್ರೋಲ್’ ಆಗ ಬಯಸುತ್ತಿದ್ದಾರೆ ಎಂದಿದ್ದಾರೆ.

  ‘‘ನಾನು ಮೋದಿ ಅವರಿಗೆ ಹೆದರದೇ ಇರುವ ಕಾರಣ ರಾತ್ರಿ ಮಲಗಿದ 30 ಸೆಕೆಂಡುಗಳಲ್ಲಿ ನಿದ್ರೆಗೆ ಜಾರುತ್ತೇನೆ. ತಮಿಳುನಾಡು ಮುಖ್ಯಮಂತ್ರಿ ಅವರು ನಿದ್ರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ? ಪ್ರಮಾಣಿಕರಲ್ಲದೇ ಇರುವುದರಿಂದ ಅವರು ರಾತ್ರಿ ನಿದ್ರಿಸಲು ಸಾಧ್ಯವಿಲ್ಲ. ಪ್ರಾಮಾಣಿಕರಲ್ಲದೇ ಇರುವುದರಿಂದ, ತಮಿಳುನಾಡು ಜನರನ್ನು ತಾನು ನಿಯಂತ್ರಿಸಬಹುದು ಎಂದು ಚಿಂತಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಅವರು ನಿಲ್ಲಲು ಸಾಧ್ಯವಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 ತಾನು ಪ್ರಾಮಾಣಿಕ ವ್ಯಕ್ತಿ ಎಂದು ಬಿಂಬಿಸಿಕೊಂಡ ರಾಹುಲ್ ಗಾಂಧಿ, ಇದರಿಂದಾಗಿ ಮೋದಿ ಅವರಿಗೆ ತನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಅವರು ತನ್ನನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದಾರೆ ಎಂದರು.

 ತಮಿಳುನಾಡು ತನ್ನ ಟಿ.ವಿ.ಯಂತೆ ಎಂದು ಮೋದಿ ಅವರು ಭಾವಿಸಿದ್ದಾರೆ. ‘ರಿಮೋಟ್ ಕಂಟ್ರೋಲ್’ ತೆಗೆದುಕೊಂಡು ತನಗೆ ಬೇಕಾದದನ್ನು ಮಾಡಬಹುದು. ತಾನು ಹಾಗೂ ಮುಖ್ಯಮಂತ್ರಿ ಮಾತನಾಡುವ ಧ್ವನಿಯನ್ನು ಹೆಚ್ಚು ಕಡಿಮೆ ಮಾಡಬಹುದು. ತಾನು ತಮಿಳುನಾಡು ಜನರನ್ನು ನಿಯಂತ್ರಿಸಬಹುದು ಎಂದು ಅವರು ಭಾವಿಸಿದ್ದಾರೆ. ಆದರೆ, ಜನರು ‘ರಿಮೋಟ್ ಕಂಟ್ರೋಲ್’ನ ಬ್ಯಾಟರಿ ತೆಗೆದು ಹಾಕಿ ಎಸೆಯಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ನರೇಂದ್ರ ಮೋದಿ ಅವರು ತನ್ನನ್ನು ಹೆದರಿಸದೇ ಇರುವುದಕ್ಕೆ ಏಕೈಕ ಕಾರಣ, ತಾನು ಭ್ರಷ್ಟನಲ್ಲದೇ ಇರುವುದು. ತಾನು ಅವರ ಎದುರು ನಿಂತುಕೊಳ್ಳಬಲ್ಲೆ ಹಾಗೂ ಸತ್ಯ ನುಡಿಯಬಲ್ಲೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂಪತ್ತು ಹಂಚಿಕೆಯ ಅಸಮಾನತೆ ಇನ್ನಷ್ಟು ಗಟ್ಟಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟ್ಯುಟಿಕೋರಿನ್‌ನಲ್ಲಿ ಪ್ರಚಾರಸಭೆಯಲ್ಲಿ ಪಾಲ್ಗೊಂಡ ಅವರು ಉಪ್ಪಿನ ಮಡಿ(ತೊಟ್ಟಿ)ಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಉಪ್ಪಿನ ಮಡಿಯಲ್ಲಿ ವರ್ಷಕ್ಕೆ 4 ತಿಂಗಳು ತಮಗೆ ಕೆಲಸವಿರುವುದಿಲ್ಲ. ಆಗ ಸರಕಾರ ಆರ್ಥಿಕ ನೆರವು ಒದಗಿಸಬೇಕು ಎಂದು ಮಹಿಳೆಯೊಬ್ಬರು ಕೋರಿದರು. ಇದಕ್ಕೆ ಉತ್ತರಿಸಿದ ರಾಹುಲ್, ಈ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎಯ ಬಳಿ ಯೋಜನೆಯೊಂದಿದೆ ಎಂದರು. ಕನಿಷ್ಟ ಆದಾಯ ಪರಿಕಲ್ಪನೆ ಅಥವಾ ‘ನ್ಯಾಯ’ ಯೋಜನೆಯು ದೇಶದ ಪ್ರತಿಯೊಂದು ಬಡ ಕುಟುಂಬದ ಹಿತಚಿಂತನೆಯ ಉದ್ದೇಶ ಹೊಂದಿದೆ. ಫಲಾನುಭವಿಗಳು ಯಾವ ರಾಜ್ಯ/ಧರ್ಮದವರು, ಯಾವ ಭಾಷೆ ಮಾತನಾಡುವವರು ಎಂಬುದನ್ನು ಪರಿಗಣಿಸದೆ ವಾರ್ಷಿಕ 72,000 ರೂ. ಹಣವನ್ನು ಅವರ ಬ್ಯಾಂಕ ಖಾತೆಗೆ ಜಮೆ ಮಾಡಲಾಗುವುದು. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದರೆ ನ್ಯಾಯ ಯೋಜನೆ ಜಾರಿಗೆ ಬರಲಿದೆ ಎಂದು ರಾಹುಲ್ ಹೇಳಿದರು. ಸಾರಾಯಿ ನಿಷೇಧ ಜಾರಿಗೊಳಿಸಬೇಕು, ಈ ಪ್ರದೇಶದಲ್ಲಿ ಖಾಲಿ ಬಿದ್ದಿರುವ ಸರಕಾರಿ ಜಮೀನಿನಲ್ಲಿ ತಮಗೆ ಮನೆ ಕಟ್ಟಿ ವಾಸಿಸಲು ಅವಕಾಶ ನೀಡಬೇಕು, ಉಪ್ಪಿನ ಮಡಿಯ ಕಾರ್ಮಿಕರಿಗೆ ಉತ್ತಮ ವೇತನ, ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ, ಪಿಂಚಣಿ ಸೌಲಭ್ಯ, ಜೀವನ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿರುವ ಕಾರ್ಮಿಕರು ಉಪ್ಪಿನಲ್ಲಿ ನಿಂತು ಕೆಲಸ ಮಾಡಬೇಕಿರುವುದರಿಂದ ಕಾಲಿನ ಪಾದ ಒಡೆಯುತ್ತದೆ ಎಂದು ಕಾರ್ಮಿಕರು ಸಮಸ್ಯೆ ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News