ಬಿಜೆಪಿಗೆ ಅಸ್ಸಾಂನಲ್ಲಿ ಸಿಎಎ ಬಗ್ಗೆ ಮಾತನಾಡುವ ಧೈರ್ಯವಿಲ್ಲ: ಪ್ರಿಯಾಂಕಾ ಗಾಂಧಿ

Update: 2021-03-01 18:28 GMT

ಗುವಾಹಟಿ: ಬಿಜೆಪಿಗೆ ಅಸ್ಸಾಂನಲ್ಲಿ ವಿವಾದಾತ್ಮಕ ಪೌರತ್ವ ಕಾಯ್ದೆ ಸಿಎಎ ಬಗ್ಗೆ ಮಾತನಾಡುವ ಧೈರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೋಮವಾರ ಹೇಳಿದ್ದಾರೆ.

ದೇಶದೆಲ್ಲೆಡೆ ಬಿಜೆಪಿಯವರು ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ)ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಅಸ್ಸಾಂಗೆ ಬಂದಾಗ ಸಿಎಎ ಕುರಿತು ಮಾತನಾಡುವ ಧೈರ್ಯವಿರುವುದಿಲ್ಲ ಎಂದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯದಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಿಯಾಂಕಾ ಹೇಳಿದ್ದಾರೆ.

ಕಳೆದ ವಾರ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಮೊದಲ ಬಾರಿ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ. ಅಸ್ಸಾಂನಲ್ಲಿ ಮಾ.27ರಿಂದ 3 ಹಂತಗಳಲ್ಲಿ ಚುನಾವಣೆ ನಡೆಯಲಿಕ್ಕಿದೆ.

 ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೆ ಹಾಗೂ ದೇಶದೆಲ್ಲೆಡೆ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದ್ದ ಪೌರತ್ವ ಕಾಯ್ದೆಯನ್ನು 2019ರ ಡಿಸೆಂಬರ್ ನಲ್ಲಿ ಅಂಗೀಕರಿಸಲಾಗಿತ್ತು. ಕಾಯ್ದೆ ವಿರುದ್ದ ಪ್ರತಿಭಟನೆಯ ವೇಳೆ ಅಸ್ಸಾಂನಲ್ಲಿ 5 ಮಂದಿ ಸಾವನ್ನಪ್ಪಿದ್ದರು. ಗುವಾಹಟಿಯಲ್ಲಿ ಕಫ್ಯೂ ಜಾರಿಗೊಳಿಸಲಾಗಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಬಿಜೆಪಿ ಪರ ಪ್ರಚಾರಕ್ಕಾಗಿ ಹಲವು ಬಾರಿ ಅಸ್ಸಾಂಗೆ ಭೇಟಿ ನೀಡಿದ್ದರೂ ಸಿಎಎ ಬಗ್ಗೆ ಚಕಾರ ಎತ್ತಿರಲಿಲ್ಲ.

ಇತ್ತೀಚೆಗೆ ನೆರೆಯ ರಾಜ್ಯ ಪ.ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಗೃಹ ಸಚಿವ ಅಮಿತ್ ಶಾ, ಕೋವಿಡ್ ಲಸಿಕೆ ಅಭಿಯಾನ ಮುಗಿದ ತಕ್ಷಣ ಬಂಗಾಳದಲ್ಲಿ ಸಿಎಎ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News