ಪರಮಾಣು ಒಪ್ಪಂದದ ಔಪಚಾರಿಕ ಸಭೆಗೆ ಕಾಲ ಪಕ್ವವಾಗಿಲ್ಲ: ಇರಾನ್

Update: 2021-03-01 18:25 GMT

ಟೆಹರಾನ್ (ಇರಾನ್), ಮಾ. 1: 2015ರ ಪರಮಾಣು ಒಪ್ಪಂದದ ಬಗ್ಗೆ ಅಮೆರಿಕವನ್ನು ಒಳಗೊಂಡಂತೆ ಔಪಚಾರಿಕ ಸಭೆಯೊಂದನ್ನು ನಡೆಸುವ ಯುರೋಪ್‌ನ ಪ್ರಸ್ತಾವವನ್ನು ಇರಾನ್ ರವಿವಾರ ತಿರಸ್ಕರಿಸಿದೆ. ಇರಾನ್ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸಲು ಅಮೆರಿಕ ವಿಫಲವಾಗಿರುವುದರಿಂದ ಈ ಮಾತುಕತೆಗೆ ಕಾಲ ಪಕ್ವವಾಗಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ವಿಯೆನ್ನಾದಲ್ಲಿ ಸಹಿ ಹಾಕಲಾದ ಇರಾನ್ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಪಕ್ಷಗಳನ್ನು ಒಳಗೊಂಡ ಔಪಚಾರಿಕ ಸಭೆಯ ಪ್ರಸ್ತಾವವನ್ನು ಐರೋಪ್ಯ ಒಕ್ಕೂಟದ ರಾಜಕೀಯ ನಿರ್ದೇಶಕರು ಕಳೆದ ತಿಂಗಳು ಮುಂದಿಟ್ಟಿದ್ದರು. ಇದನ್ನು ಅಮೆರಿಕದ ಜೋ ಬೈಡನ್ ಸರಕರ ಒಪ್ಪಿಕೊಂಡಿತ್ತು.

‘‘ಅಮೆರಿಕ ಮತ್ತು ಮೂರು ಯುರೋಪಿಯನ್ ದೇಶಗಳ ಇತ್ತೀಚಿನ ನಿಲುವುಗಳು ಮತ್ತು ಕೃತ್ಯಗಳನ್ನು ಪರಿಗಣಿಸಿದರೆ, ಯುರೋಪಿಯನ್ ಸಮನ್ವಯಕಾರರು ಪ್ರಸ್ತಾಪಿಸಿರುವ ಔಪಚಾರಿಕ ಸಭೆಯನ್ನು ನಡೆಸಲು ಕಾಲ ಪಕ್ವವಾಗಿಲ್ಲ’’ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಸಯೀದ್ ಖತೀಬ್‌ಝಾದೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

2015ರ ಪರಮಾಣು ಒಪ್ಪಂದಕ್ಕೆ ಇರಾನ್, ಅಮೆರಿಕ, ಜರ್ಮನಿ, ಬ್ರಿಟನ್, ಫ್ರಾನ್ಸ್, ರಶ್ಯ ಮತ್ತು ಚೀನಾಗಳು ಸಹಿ ಹಾಕಿದ್ದವು.

2018ರಲ್ಲಿ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಒಪ್ಪಂದದಿಂದ ಹೊರತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News