ಪುತ್ತೂರು: ಮಹಿಳಾ ಎಸ್ಸೈ ಮೇಲೆ ಹಲ್ಲೆ ಪ್ರಕರಣ; ಇಬ್ಬರು ಸಹೋದರಿಯರ ಬಂಧನ

Update: 2021-03-02 04:59 GMT

ಪುತ್ತೂರು: ದೂರು ಅರ್ಜಿಯೊಂದರ ವಿಚಾರಣೆ ವೇಳೆ ಮಹಿಳೆಯೋರ್ವರು ತನ್ನ ಪತಿಗೆ ಹಲ್ಲೆ ನಡೆಸಲು ಮುಂದಾದಾಗ ತಡೆಯಲು ಹೋದ ಮಹಿಳಾ ಠಾಣೆ ಎಸ್ಸೈ ಅವರಿಗೆ ಮಹಿಳೆಯರಿಬ್ಬರು ಹಲ್ಲೆ ನಡೆಸಿದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಬಗ್ಗೆ ವರದಿಯಾಗಿದ್ದು, ಹಲ್ಲೆ ನಡೆಸಿದ ಆರೋಪಿ ಮಹಿಳೆಯರನ್ನು ಬಂಧಿಸಲಾಗಿದೆ.

ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ಸೇಸಮ್ಮ ಅವರು ಹಲ್ಲೆಗೊಳಗಾದವರು. ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿ’ಸೋಜ ಅವರ ಪತ್ನಿ ಬೇಬಿ ಡಿಸೋಜ (34) ಮತ್ತು ಆಕೆಯ ಸಹೋದರಿ ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ (35) ಹಲ್ಲೆ ನಡೆಸಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ

ಫೆ.28ರಂದು ಸುನಿತಾ ಡಿ ಸೋಜಾ ಎಂಬವರು ಬೇಬಿ ಡಿಸೋಜಾ ವಿರುದ್ಧ ಮತ್ತು ಬೇಬಿ ಡಿಸೋಜಾ, ಸುನಿತಾ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ದೂರಿನ ವಿಚಾರಣೆಗಾಗಿ ಅವರಿಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಬೇಬಿ ಡಿಸೋಜಳ ಸಹೋದರಿ ಹಾಸನದಲ್ಲಿರುವ ಆಶಾ ಕೂಡಾ ಜೊತೆಗೆ ಬಂದಿದ್ದರು. ಎಸ್ಸೈ ಸೇಸಮ್ಮ ಅವರು ಕುಟುಂಬ ಸಮಸ್ಯೆಯನ್ನು  ವಿಚಾರಿಸುತ್ತಿದ್ದ ವೇಳೆ ಬೇಬಿ ಡಿಸೋಜಾ ತನ್ನ ಪತಿ ಲಾರೆನ್ಸ್ ಡಿಸೋಜಾ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದು, ಇದನ್ನು ಗಮನಿಸಿದ ಎಸ್ಸೈ ಸೇಸಮ್ಮ ಹಲ್ಲೆ ನಡೆಯುವುದನ್ನು ತಪ್ಪಿಸಲು ಮುಂದಾದರು. ಈ ವೇಳೆ ಬೇಬಿ ಡಿಸೋಜ ಮತ್ತು ಆಶಾ ಅವರು ಎಸ್ಸೈ ಸೇಸಮ್ಮ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಘಟನೆಯ ಬಳಿಕ ಎಸ್ಸೈ ಸೇಸಮ್ಮ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬೇಬಿ ಡಿಸೋಜ ಮತ್ತು ಆಶಾ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News