ಪ್ರಧಾನಿಯನ್ನು ಪ್ರಶಂಸಿಸಿದ ಗುಲಾಮ್ ನಬಿ ಆಝಾದ್: ಸ್ಪಷ್ಟನೆ

Update: 2021-03-02 18:33 GMT

ಹೊಸದಿಲ್ಲಿ, ಮಾ. 3: ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್ ಅವರನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಗುಲಾಮ್ ನಬಿ ಆಝಾದ್ ಅವರ ಆಪ್ತ ಮೂಲಗಳು ಪ್ರತಿಪಾದಿಸಿವೆ. ಜಿ-23 ಎಂದು ಕರೆಯಲಾಗುವ ಗುಲಾಮ್ ನಬಿ ಆಝಾದ್ ಹಾಗೂ ಕಾಂಗ್ರೆಸ್‌ನ ಭಿನ್ನಮತಿಯರು ಜಮ್ಮುವಿನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಗುಲಾಮ್ ನಬಿ ಆಝಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಶಿಸಿದ್ದರು.

ಈ ಹೇಳಿಕೆಯಿಂದ ಕಾಂಗ್ರೆಸ್ ದಿಗ್ಭ್ರಮೆಗೊಂಡಿತ್ತು. ‘‘ನಾನು ಹಲವು ನಾಯಕರ ಬಹಳಷ್ಟು ವಿಷಯಗಳನ್ನು ಇಷ್ಟಪಡುತ್ತೇನೆ. ನಾನು ಹಳ್ಳಿಯಿಂದ ಬಂದವನು. ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನಮ್ಮ ಪ್ರಧಾನಿ (ನರೇಂದ್ರ ಮೋದಿ) ಅವರು ಕೂಡ ಹಳ್ಳಿಯಿಂದ ಬಂದವರು ಹಾಗೂ ಅವರು ಚಹಾ ಮಾರುತ್ತಿದ್ದರು. ನಾವು ರಾಜಕೀಯ ವಿರೋಧಿಗಳು. ಆದರೆ, ಅವರು ಸತ್ಯವನ್ನು ಮುಚ್ಚಿಡಲಿಲ್ಲ. ಸತ್ಯ ಮುಚ್ಚಿಡುವವರು ಭ್ರಮಾ ಲೋಕದಲ್ಲಿ ಬದುಕುತ್ತಿರುತ್ತಾರೆ’’ ಎಂದು ಗುಲಾಮ್ ನಬಿ ಆಝಾದ್ ಹೇಳಿದರು. ರಾಜ್ಯ ಸಭೆಯಿಂದ ನಿವೃತ್ತರಾಗಿದ್ದ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾವನಾತ್ಮಕ ಬೀಳ್ಕೊಡುಗೆ ನೀಡಿದ ಬಳಿಕ ಗುಲಾಮ್ ನಬಿ ಆಝಾದ್ ಈ ಹೇಳಿಕೆ ನೀಡಿದ್ದಾರೆ. ಆದರೆ, ಇಂದು ಗುಲಾಂ ನಬಿ ಆಝಾದ್ ಅವರ ಆಪ್ತ ಮೂಲಗಳು, ಗುಲಾಮ್ ನಬಿ ಆಝಾದ್ ಅವರು ಪ್ರಧಾನಿ ಅವರನ್ನು ಪ್ರಶಂಸಿಸಿಲ್ಲ. ಅವರನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಬಗ್ಗೆ ಅವರು ಸೂಕ್ತ ಸಂದರ್ಭದಲ್ಲಿ ಸ್ಪಷ್ಟನೆ ನೀಡಲಿದ್ದಾರೆ ಎಂದಿವೆ.

ಗುಲಾಂ ನಬಿ ಆಝಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರುತ್ತಿರುವ ವಿಷಯದ ಬಗ್ಗೆ ಮಾತ್ರ ಮಾತನಾಡಿದರು ಎಂದು ಗುಲಾಂ ನಬಿ ಆಝಾದ್ ಅವರ ಆಪ್ತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News