​ಬೆಳ್ತಂಗಡಿ : ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ

Update: 2021-03-05 09:34 GMT

ಬೆಳ್ತಂಗಡಿ : ಒಂದು ವಾರದಿಂದ ನಾಪತ್ತೆಯಾಗಿದ್ದ ನೆರಿಯ ಗ್ರಾಮದ ಕೋಲೋಡಿ ನಿವಾಸಿ ತೇಜಸ್ವಿನಿ (23) ಅವರ ಮೃತದೇಹ  ಮನೆ ಸಮೀಪದ ಅರಣ್ಯದಲ್ಲಿ ಬುಧವಾರ ಪತ್ತೆಯಾಗಿದೆ. 

ಫೆ.22ರಂದು ತೇಜಸ್ವಿನಿ ಉಜಿರೆಯಿಂದ ಮನೆಗೆ ಹೋಗುವ ಸಂದರ್ಭ ಕಾಣೆಯಾಗಿದ್ದರು. ಇಂದು ಸ್ಥಳೀಯರು ಬಿದಿರು ಕಡಿಯುವ ಉದ್ದೇಶದಿಂದ ಕೋಲೋಡಿ ಕಾಡಿಗೆ ಹೋಗಿದ್ದು, ಈ ವೇಳೆ ಆಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ದಂಪತಿಯ ಪುತ್ರಿ ತೇಜಸ್ವಿನಿ ಕಳೆದ ನಾಲ್ಕು ವರ್ಷಗಳಿಂದ ಉಜಿರೆ ಪರಿಸರ ನಿವಾಸಿಯೊಬ್ಬರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು, ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದು, ಅವರ ಮನೆಯಲ್ಲಿಯೇ ವಾಸ್ತವ್ಯವಿದ್ದರು. ಫೆ.22ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ, ನಾಪತ್ತೆಯಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದರು.

ಧರ್ಮಸ್ಥಳ  ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News