ಗುರುಪುರ ಗುಡ್ಡಕುಸಿತ ಪ್ರದೇಶದ ಜನರಿಂದ ಶಾಸಕರಿಗೆ ಮನವಿ

Update: 2021-03-03 14:44 GMT

ಗುರುಪುರ, ಮಾ.3: ಎಂಟು ತಿಂಗಳ ಹಿಂದೆ ಭಾರೀ ಗುಡ್ಡ ಕುಸಿತಗೊಂಡು ಮಕ್ಕಳಿಬ್ಬರು ಮೃತಪಟ್ಟಿದ್ದ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಶಾಸಕ ಡಾ. ಭರತ್ ಶೆಟ್ಟಿಗೆ ಸ್ಥಳೀಯರು ಅಹವಾಲು ಸಲ್ಲಿಸಿದರು.

ಆರಂಭದಲ್ಲಿ ಸರಕಾರದಿಂದ ಪರಿಹಾರವಾಗಿ 10,000 ರೂ ಸಿಕ್ಕಿತ್ತು. ಬಳಿಕ ಮೂರ್ನಾಲ್ಕು ತಿಂಗಳು ಸರಕಾರ ಸೂಚಿಸಿದ ಬಾಡಿಗೆ ಮನೆಯಲ್ಲಿದ್ದೆವು. ಬಾಡಿಗೆ ಮನೆ ಮಾಲಕರು ಬಾಡಿಗೆ ಕೇಳಿ ಕಿರುಕುಳ ನೀಡಲಾರಂಭಿಸಿದ ಬಳಿಕ ಮನೆ ಬಿಟ್ಟು ಹಳೆಯ ಮನೆಗೆ ಬಂದಿದ್ದೇವೆ. ಒಂದೆಡೆ ಕೆಲಸವಿಲ್ಲ, ಇನ್ನೊಂದೆಡೆ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಕುಸಿದ ಗುಡ್ಡದಲ್ಲೇ ಮುಂದಿನ ಮಳೆಗಾಲದವರೆಗೆ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂತ್ರಸ್ತರು ಶಾಸಕರಿಗೆ ವಿವರಿಸಿದರು.

ಈಗಲೂ ಸರಕಾರ ಸೂಚಿಸಿದ ಬಾಡಿಗೆ ಮನೆಯಲ್ಲೇ ಇದ್ದೇವೆ. ಸರಕಾರದಿಂದ ಬಾಡಿಗೆ ಬಂದಿಲ್ಲ. ಮನೆ ಮಾಲಕರು ಮನೆಗೆ ಬೀಗ ಜಡಿದಿದ್ದಾರೆ, ಪಾತ್ರೆ-ಪರಡಿ ಕೊಂಡೊಯ್ಯಲು ಬಿಡುವುದಿಲ್ಲ. ವಿದ್ಯುತ್ ಸಂಪರ್ಕ ಕಡಿದು ಹಾಕಿದ್ದಾರೆ. ಶಾಲಾ ಮಕ್ಕಳ ಸ್ಥಿತಿ ಶೋಚನೀಯವಾಗಿದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಸಂತ್ರಸ್ತರ ಅಹವಾಲು ಸ್ವೀಕರಿಸಿದ ಶಾಸಕ ಡಾ. ಭರತ್ ಶೆಟ್ಟಿ ಸಂಬಂಧಿತ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ನಾಗರಿಕರ ಸಮಸ್ಯೆಗಳಿಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

15 ದಿನದಲ್ಲಿ ಹಕ್ಕುಪತ್ರ ವಿತರಣೆ

ಮೂಳೂರು ಮಠದಗುಡ್ಡೆ ಸಂತ್ರಸ್ತರ ಪರಿಹಾರ ಹಾಗೂ ವಾಸ್ತವ್ಯ ಯೋಗ್ಯ ನಿವೇಶನದ ಕುರಿತು ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪ-ತಹಶೀಲ್ದಾರ್ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು ಬಾರಿ ಮಹತ್ವದ ಚರ್ಚೆ ನಡೆಸಲಾಗಿದೆ. ಬಾಡಿಗೆ ಹಣ ಸಂದಾಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ 15 ದಿನದೊಳಗೆ ಹಕ್ಕುಪತ್ರ ನೀಡಲಾಗುವುದು. ಹಕ್ಕುಪತ್ರ ಇಲ್ಲದಿದ್ದರೆ, ಸರಕಾರದಿಂದ ಪರಿಹಾರ ಸಿಗದು. ಹಾಗಾಗಿ ಮೊದಲಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News