ಬಾವಿ ಕೆಲಸಕ್ಕೆ ಇಳಿದ ಮೂವರು ಅಸ್ವಸ್ಥ: ಓರ್ವ ಮೃತ್ಯು

Update: 2021-03-03 16:15 GMT

ಕಾರ್ಕಳ, ಫೆ.3: ಬಾವಿಗೆ ಇಳಿದು ಅಸ್ವಸ್ಥಗೊಂಡ ಮೂವರ ಪೈಕಿ ಓರ್ವ ಮೃತಪಟ್ಟ ಘಟನೆ ಮಾ.2ರಂದು ಬೆಳಗ್ಗೆ ನೀರೆ ಗ್ರಾಪಂ ಕಚೇರಿ ಬಳಿಯ ಲೇ ಔಟ್‌ನಲ್ಲಿ ನಡೆದಿದೆ.

ಮೃತರನ್ನು ಮಣಿಕಂಠ(25) ಎಂದು ಗುರುತಿಸಲಾಗಿದೆ. ಇವರೊಂದಿಗೆ ಬಾವಿಗೆ ಇಳಿದ ಗಿರೀಶ್ ಮತ್ತು ಇವರಿಬ್ಬರು ರಕ್ಷಿಸಲು ಬಾವಿಗೆ ಇಳಿದ ನಜೀರ್ ಸಾಹೇಬ್ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಚ್ಚುತ ನಾಯಕ್ ಎಂಬವರ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಮನೆ ಸಮೀಪ ಇರುವ ಬಾವಿಯ ಕೆಲಸವನ್ನು ಮಾಡಲು ಮಣಿಕಂಠ ಮತ್ತು ಗಿರೀಶ್ ಬಾವಿಗೆ ಇಳಿದಿದ್ದು, ಅಲ್ಲಿ ಕೆಲಸ ಮಾಡಲು ಆರಂಭಿಸುವಾಗ ಇಬ್ಬರು ಪ್ರಜ್ಞೆ ತಪ್ಪಿಬಿದ್ದರೆನ್ನಲಾಗಿದೆ. ಇವರನ್ನು ರಕ್ಷಿಸಲು ಅಲ್ಲಿಯೇ ಇದ್ದ ನಝೀರ್ ಬಾವಿಗೆ ಇಳಿದಿದ್ದು ಅವರು ಕೂಡ ಪ್ರಜ್ಞೆ ತಪ್ಪಿ ಬಿದ್ದರು.

ಬಳಿಕ ಆ ಮೂರು ಜನರನ್ನು ಸುಜೀತ್ ಎಂಬವರು ಬಾವಿಯಿಂದ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದರು. ಇವರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಣಿಕಂಠ ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಬಾವಿಯ ಒಳಗಡೆ ಕೃತಕ ಉಸಿರಾಟದ ವ್ಯವಸ್ಥೆ ಹಾಗೂ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ವಹಿಸದೆ ಬಾವಿಗೆ ಇಳಿಸಿರುವ ಮನೆಯ ಮಾಲಕ ಅಚ್ಯುತ ನಾಯಕ್ ಮತ್ತು ಗುತ್ತಿಗೆದಾರ ನಾಗರಾಜ್ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News