ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ವಿನಯ್ ‌ರಾಜ್ ಹೇಳಿಕೆ ಹಾಸ್ಯಾಸ್ಪದ : ರಾಧಾಕೃಷ್ಣ

Update: 2021-03-04 16:16 GMT

ಮಂಗಳೂರು, ಮಾ.4: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರು ರಾಜಕೀಯ ಪ್ರಚಾರ ಪಡೆಯಲು ಬಯಸಿ ಜನತೆಯಲ್ಲಿ ಗೊಂದಲ ಸ್ಟಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ರಾಧಾಕೃಷ್ಣ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಕೆಲಸ ಕಾರ್ಯಗಳು ಕೋರ್ಟ್ ನಿರ್ದೇಶನದಂತೆ ಸ್ಥಗಿತಗೊಂಡಿತ್ತು. ಆದರೆ ವಿನಯರಾಜ್ ನ್ಯಾಯಾಲಯದ ತಡೆಯಾಜ್ಞೆ ಇಲ್ಲ ಎಂದು ಹೇಳಿಕೆ ನೀಡಿರುವುದು ಅವರಿಗೆ ಕಾನೂನಿನ ಬಗ್ಗೆ ಇರುವ ಅಲ್ಪಜ್ಞಾನವನ್ನು ಸೂಚಿಸುತ್ತದೆ. ತಮ್ಮ ಹೇಳಿಕೆಯ ಮೂಲಕ ಕೋರ್ಟ್ ಆದೇಶವನ್ನು ಅವರು ಖಂಡಿಸಿದ್ದಾರೆ ಎಂದರು.

ಉಚ್ಛ ನ್ಯಾಯಾಲಯದ ಆದೇಶದಂತೆಯೇ ಸ್ಮಾರ್ಟ್ ಸಿಟಿ ಕಾರ್ಯಗಳು ನಡೆಯುತ್ತಿವೆ. ಜನತೆ ಗೊಂದಲ ಪಡುವ ಅಗತ್ಯವಿಲ್ಲ. 2020ರ ಡಿ.23ರಂದು ಪಾಲಿಕೆ ಆಯುಕ್ತ ಹಾಗೂ ಆ ಸಂದರ್ಭ ಸ್ಮಾರ್ಟ್ ಸಿಟಿ ನಿರ್ದೇಶಕರಾಗಿದ್ದ ಅಕ್ಷಯ್ ಶ್ರೀಧರ್‌ರವರಿಗೆ ಕರ್ನಾಟಕ ಸ್ಟೇಟ್ ಲೀಗಲ್ ಸರ್ವಿಸಸ್ ಅಥೋರಿಟಿ ಪ್ರಿವಿಶನಸ್ಸ್ ಆ್ ದಿ ಕನ್‌ಸ್ಟ್ರಕ್ಷನ್ ಆ್ಯಂಡ್ ಡೆಮೋಲಿಷನ್ ವೇಸ್ಟ್ ಮ್ಯಾನೇಜ್‌ಮೆಂಟ್ ರೂಲ್ಸ್ 2016 ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದು, ಯಾಕೆ ಪಾಲಿಸಿಲ್ಲ ಎಂದು ಕೋಟ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರವಾಗಿ ಪಾಲಿಕೆ ಆಯುಕ್ತರು ನಿಯಮಗಳನ್ನು ಪಾಲಿಸುವುದಾಗಿ ಹೇಳಿಕೆಯನ್ನು ನೀಡಿದ್ದರು. ಈ ಪ್ರಕಾರ ಸ್ಮಾರ್ಟ್ ಸಿಟಿಯ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಮುಂದುವರಿದ ಕಾನೂನು ಪ್ರಕ್ರಿಯೆಯಲ್ಲಿ 2021ರ ಫೆ.15ರಂದು ನ್ಯಾಯಾಲಯದ ಆದೇಶದಲ್ಲಿ ಈ ಬಗ್ಗೆ ಹೈಕೋರ್ಟ್‌ನ ತತ್ಸಂಬಂಧಿತ ಪೀಠಕ್ಕೆ ಅಫಿದಾವಿತ್ ಸಲ್ಲಿಸುವಂತೆ ಆದೇಶ ನೀಡಿದೆ. ಆ ಪ್ರಕಾರ ಕಾನೂನು ಪ್ರಕ್ರಿಯೆಯು ಮುಂದುವರಿಯುತ್ತಿದೆ. ಅತೀ ಶೀಘ್ರವಾಗಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ರಾಧಾಕೃಷ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ವಕ್ತಾರ ಜಗದೀಶ ಶೇಣವ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News