ಬೆಲೆಯೇರಿಕೆ, ಆರ್ಥಿಕ ಅವ್ಯವಸ್ಥೆಯಿಂದ ಬಡವರ ಬದುಕು ನಾಶ: ವಿನಯಕುಮಾರ್ ಸೊರಕೆ

Update: 2021-03-04 13:31 GMT

ಮಣಿಪಾಲ, ಮಾ.4: ಕೇಂದ್ರ ಸರಕಾರ ಜಾರಿಗೆ ತರಲ್ಲುದ್ದೇಶಿಸಿರುವ ಕೋಟ್ಪಾ ಕಾಯಿದೆ ತಿದ್ದುಪಡಿಯಿಂದ ಬೀಡಿ ಉದ್ಯಮವನ್ನು ಹೊರಗಿಡು ವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಬೀಡಿ ಉದ್ಯಮ ಕೆಲಸಗಾರರ ಒಕ್ಕೂಟ, ಕರ್ನಾಟಕ ರಾಜ್ಯ ಬೀಡಿ ಗುತ್ತಿಗೆದಾರರ ಸಂಘ, ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಉಡುಪಿ ಜಿಲ್ಲಾ ಸಮಿತಿ, ಕಾರ್ಕಳ ಪ್ರದೇಶ ಬೀಡಿ ಕೆಲಸಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಉದ್ಯಮದ ಕೆಲಸಗಾರರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾರ್ಪೋರೇಟ್ ಸ್ನೇಹಿತರ, ಬಂಡವಾಳಶಾಹಿಗಳ ಹಾಗೂ ಶ್ರೀಮಂತರ ಪ್ರಗತಿ ಬಯಸುತ್ತಿರುವ ಕೇಂದ್ರ ಸರಕಾರ ರೈತರು, ಕಾರ್ಮಿಕರ ಸಹಿತ ಬಡವರ್ಗದ ಜನರ ಏಳಿಗೆ, ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು.

ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಆರ್ಥಿಕ ವ್ಯವಸ್ಥೆಯೇ ನಾಶವಾಗಿದೆ. ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಯ ಭರವಸೆ, ಭರವಸೆಯಾಗಿ ಉಳಿದುಕೊಂಡಿದೆ. ಬಿಜೆಪಿ ಆಡಳಿತದ ಆರು ವರ್ಷಗಳಲ್ಲಿ ಕೇವಲ 1ಲಕ್ಷ ಉದ್ಯೋಗ ನೀಡಲಾಗಿದೆ. ಕೊರೋನಾ ಬಳಿಕ ಇದ್ದ ಉದ್ಯೋಗವನ್ನು ಕಿತ್ತುಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಿ. ಎಂ. ಭಟ್ ಮಾತನಾಡಿ, ತಂಬಾಕು ಬೆಳೆವ ರೈತರು, ಸಿಗರೇಟು ಕಂಪನಿ, ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತಂಬಾಕು ನಿರ್ಬಂಧಕ್ಕೆ ಭಾರತ ಸಹಿ ಹಾಕಿದ್ದು 2015ರಲ್ಲಿ ಜಾರಿಗೆ ಬಂದ ಕೋಟ್ಪಾ ಕಾಯಿದೆ ಯಿಂದ ಬೀಡಿ ಉದ್ಯಮ ಅರ್ಧಕ್ಕರ್ಧ ನಾಶವಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬೀಡಿ ಉದ್ಯಮ ಅತಿ ದೊಡ್ಡ ಕೈಗಾರಿಕೆಯಾಗಿದೆ. 7ಲಕ್ಷಕ್ಕೂ ಅಧಿಕ ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಈ ಉದ್ಯಮದಲ್ಲಿ ದುಡಿಯುತಿದ್ದಾರೆ ಹಾಗೂ ಇದನ್ನೇ ನಂಬಿ ಬದುಕುತಿದ್ದಾರೆ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ರೈತರು, ಕಾರ್ಮಿಕರು ನ್ಯಾಯಕ್ಕಾಗಿ ಹೋರಾಡುತ್ತಿದ್ದು ದೇಶದ್ರೋಹಿಗಳಾಗಲೂ ಸಿದ್ಧರಿದ್ದೇವೆ. ಬೀಡಿಯಿಂದ ಬದುಕು ಕಟ್ಟಿಕೊಂಡ ಮಹಿಳೆಯರನ್ನು ಬೀದಿಪಾಲು ಮಾಡದೆ ಕೋಟ್ಪಾದಿಂದ ಬೀಡಿಯನ್ನು ಹೊರಗಿಡಿ ಎಂದು ಒತ್ತಾಯಿಸಿದರು.

ತಂಬಾಕು ನಿಷೇಧ ಮತ್ತು ನಿಯಂತ್ರಣ ಕಾಯಿದೆಯಿಂದ(ಕೋಟ್ಪಾ) ಬೀಡಿ ಉದ್ಯಮವನ್ನು ಹೊರಗಿಡದಿದ್ದರೆ ವಾರದಲ್ಲಿ 3ದಿನಕ್ಕೆ ಸೀಮಿತವಾದ ಕೆಲಸ ಇಲ್ಲದೆ ಕೊರೋನಾ ಬಳಿಕ ಮಹಿಳೆಯರು ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಪರ್ಯಾಯ ವ್ಯವಸ್ಥೆ ಬಳಿಕ ಕೋಟ್ಪಾ ಕಾಯಿದೆಗೆ ತಿದ್ದುಪಡಿ ಮಾಡಿ ಎಂದು ಬಿ.ಎಂ.ಭಟ್ ಆಗ್ರಹಿಸಿದರು.

ಎಐಟಿಯುಸಿ ಉಪಾಧ್ಯಕ್ಷ ಬಿ. ಶೇಖರ್, ದಕ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಪೂಜಾರಿ, ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಬೈಲೂರು, ಕಾರ್ಕಳ ಪ್ರದೇಶ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಹಮೀದ್, ಕೃಷ್ಣಪ್ಪ ತೊಕ್ಕೊಟ್ಟು ಉಪಸ್ಥಿತರಿದ್ದರು. ಈಶ್ವರಿ ಸ್ವಾಗತಿಸಿ, ವಂದಿಸಿದರು.

ಬಳಿಕ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News